ಬೆಳಗಾವಿ: ಕಳೆದ ಆರು ತಿಂಗಳಿಂದ ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿದಿದ್ದ ಬೆಂಗಳೂರಿನ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.
ಕಳೆದ ಜೂನ್ ತಿಂಗಳಲ್ಲಿ ನಡೆದ ದುರಂತದ ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿತ್ತು. ಇದೀಗ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ನೇತೃತ್ವದ ಸಮಿತಿ ನೀಡಿರುವ ಸುರಕ್ಷತಾ ವರದಿಯನ್ನು ಆಧರಿಸಿ, ಸರ್ಕಾರವು ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಇನ್ನು ಮುಂದೆ ಪಂದ್ಯಗಳ ಸಂದರ್ಭದಲ್ಲಿ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಗೃಹ ಇಲಾಖೆಯೇ ನಿರ್ವಹಿಸಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೆಎಸ್‌ಸಿಎ ಮನವಿಗೆ ಸ್ಪಂದಿಸಿದ ಸರ್ಕಾರ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಅವರ ಪದಾಧಿಕಾರಿಗಳ ತಂಡ, ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಬೆಂಗಳೂರಿನಿಂದ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳು ಬೇರೆಡೆಗೆ ಸ್ಥಳಾಂತರವಾಗದಂತೆ ನೋಡಿಕೊಳ್ಳಲು ಅನುಮತಿ ನೀಡಬೇಕೆಂದು ಅವರು ಕೋರಿದ್ದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಂಪುಟ ಸಭೆಯಲ್ಲಿ ಚರ್ಚಿಸಿ ತ್ವರಿತವಾಗಿ ಒಪ್ಪಿಗೆ ಸೂಚಿಸಿದೆ.
ಸುರಕ್ಷತೆ ಮತ್ತು ಕ್ರೀಡೆ ಒಟ್ಟೊಟ್ಟಿಗೆ: ಡಿಸಿಎಂ ಭರವಸೆ
ಈ ಕುರಿತು ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, “ರಾಜ್ಯದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸುವುದು ಸರ್ಕಾರದ ಉದ್ದೇಶವಲ್ಲ. ಆದರೆ, ಸಾರ್ವಜನಿಕರ ಪ್ರಾಣ ರಕ್ಷಣೆ ಮತ್ತು ಜನಜಂಗುಳಿ ನಿಯಂತ್ರಣ ನಮ್ಮ ಆದ್ಯತೆಯಾಗಿದೆ. ಮೈಕಲ್ ಡಿ ಕುನ್ಹಾ ಸಮಿತಿ ನೀಡಿರುವ ಸುರಕ್ಷತಾ ಸಲಹೆಗಳನ್ನು ಹಂತ ಹಂತವಾಗಿ ಪಾಲನೆ ಮಾಡಲಾಗುವುದು. ರಾಜ್ಯದ ಗೌರವಕ್ಕೆ ಧಕ್ಕೆ ಬಾರದಂತೆ ಮತ್ತು ಅಭಿಮಾನಿಗಳ ಭಾವನೆಗಳಿಗೆ ಬೆಲೆಕೊಟ್ಟು, ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ,” ಎಂದು ಕೆಎಸ್‌ಸಿಎ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದರು.
ಏನಾಗಿತ್ತು ಆ ದುರಂತ?
2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚಾಂಪಿಯನ್ ಆದ ಹಿನ್ನೆಲೆಯಲ್ಲಿ, ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ವೇಳೆ ಕ್ರೀಡಾಂಗಣದ ಸಾಮರ್ಥ್ಯಕ್ಕೂ ಮೀರಿ ಜನಸಾಗರ ಹರಿದು ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಈ ದಾರುಣ ಘಟನೆಯಲ್ಲಿ 12 ಮಂದಿ ಕ್ರೀಡಾಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸದಂತೆ ತಡೆ ನೀಡಲಾಗಿತ್ತು. ಇದೀಗ ಸರ್ಕಾರದ ಅನುಮತಿಯೊಂದಿಗೆ ಚಿನ್ನಸ್ವಾಮಿ ಅಂಗಳ ಮತ್ತೆ ಕ್ರಿಕೆಟ್ ಕಾಳಗಕ್ಕೆ ಸಜ್ಜಾಗುತ್ತಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ‘ವೇಸ್ಟ್ ಪ್ಲಾಸ್ಟಿಕ್’ಗೆ ಹೊರ ರಾಜ್ಯದಲ್ಲಿ ಬೇಡಿಕೆ | ಇನ್ಮುಂದೆ ನಗರದ ಕಸ ಆಂಧ್ರ ಸಿಮೆಂಟ್ ಕಾರ್ಖಾನೆಗೆ!



















