ಬೆಂಗಳೂರು : ಇನ್ಮುಂದೆ ಆಂಧ್ರಪ್ರದೇಶದ ಕಡಪದಲ್ಲಿರುವ ಸಿಮೆಂಟ್ ಕಾರ್ಖಾನೆಗೆ ಸಿಲಿಕಾನ್ ಸಿಟಿ ಬೆಂಗಳೂರಿಂದ ಪ್ರತಿನಿತ್ಯ 300ರಿಂದ 350 ಟನ್ ‘ಲೋ ವ್ಯಾಲ್ಯೂ ಪ್ಲಾಸ್ಟಿಕ್‘ (ಎಲ್‌ಪಿ) ಅನ್ನು ಸರಬರಾಜು ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತ್ಯಾಜ್ಯ ಘಟಕದ ಅಧ್ಯಕ್ಷ ಕರೀಗೌಡ ಅವರು, ಕಡಪದಲ್ಲಿರುವ ದಾಲ್ಮೀಯಾ ಸಿಮೆಂಟ್ಸ್ ಲಿಮಿಟೆಡ್ ಸಿಮೆಂಟ್ ಕಾರ್ಖಾನೆಯ ಘಟಕದ ಕಾರ್ಯನಿರ್ವಹಣೆಗೆ ‘ಲೋ ವ್ಯಾಲ್ಯೂ ಪ್ಲಾಸ್ಟಿಕ್’ ಸರಬರಾಜು ಮಾಡಲು ಕೋರಿದೆ. ಹೀಗಾಗಿ ಡಿ.15ರಿಂದ ಪ್ರತಿನಿತ್ಯವೂ ಪ್ಲಾಸ್ಟಿಕ್ ತ್ಯಾಜ್ಯ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಇನ್ನೂ ಹಲವು ಸಿಮೆಂಟ್ ಕಾರ್ಖಾನೆಗಳೂ ಆಸಕ್ತಿ ತೋರಿದ್ದು, ಹೀಗಾಗಿ, ನಗರದಲ್ಲಿ ತ್ಯಾಜ್ಯ ವಿಂಗಡಣೆಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಈ ತ್ಯಾಜ್ಯವನ್ನು ಅವರು ಇಂಧನವಾಗಿ ಕಾರ್ಖಾನೆಯಲ್ಲಿ ಸಿಮೆಂಟ್ ತಯಾರಿಸಲು ಬಳಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೊದಲು ತ್ಯಾಜ್ಯ ಪ್ಲಾಸ್ಟಿಕ್ ಬಿಡದಿಯ ಪ್ಲಾಂಟ್ ಗೆ ರವಾನೆ ಮಾಡಲಾಗುತ್ತಿತ್ತು. ಈಗ ಈ ತ್ಯಾಜ್ಯ ಪ್ಲಾಸ್ಟಿಕ್ ಗೆ ರಾಷ್ಟ್ರೀಯ ಕಂಪನಿಯಿಂದ ಬೇಡಿಕೆ ಹೆಚ್ಚಾಗಿದೆ. ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕಕ್ಕೆ ಆರಂಭದಲ್ಲಿ 18 ಟನ್ ಅನ್ನು ನಾಲ್ಕು ಕಾಂಪ್ಯಾಕ್ಟರ್‌ಗಳಲ್ಲಿ ಕಳುಹಿಸಲಾಗುತ್ತಿತ್ತು. ಈಗ 60-70 ಕಾಂಪ್ಯಾಕ್ಟರ್‌ಗಳಲ್ಲಿ 300ರಿಂದ 350 ಟನ್ ಎಲ್‌ಪಿ ಅನ್ನು ನಿತ್ಯ ವಿಲೇವಾರಿ ಮಾಡಲಾಗುತ್ತಿದೆ. ಅಕ್ಟೋಬರ್‌ನಲ್ಲಿ 11.99 ಲಕ್ಷ ಟನ್, ನವೆಂಬರ್‌ನಲ್ಲಿ 67.26 ಲಕ್ಷ ಟನ್ ವಿಲೇವಾರಿ ಮಾಡಲಾಗಿದೆ. ಇದರಿಂದ ಭೂಭರ್ತಿ ಪ್ರದೇಶಕ್ಕೆ ಕಳುಹಿಸಲಾಗುತ್ತಿದ್ದ 302 ಕಾಂಪ್ಯಾಕ್ಟರ್‌ಗಳ ತ್ಯಾಜ್ಯ ಕಡಿಮೆಯಾಗಿದೆ ಎಂದು ಕರೀಗೌಡ ಅವರು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೇ, ನಾಗರಿಕರು ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಮಾಡಿ ವಿಲೇವಾರಿ ಮಾಡಿದಲ್ಲಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುಂದರ ಮತ್ತು ಸ್ವಚ್ಛವಾಗಿ ಕಾಪಾಡಿಕೊಂಡು ಪ್ರಕೃತಿಯ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಬಹುದಾಗಿದೆ. ಅನಧಿಕೃತ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುರಿಯದೆ, ಹಸಿ, ಒಣ ತ್ಯಾಜ್ಯವನ್ನು ವಿಂಗಡಿಸಿ ಕಸದ ವಾಹನಗಳಿಗೆ ನೀಡಬೇಕು’ ಎಂದ ಮನವಿ ಮಾಡಿದ್ದಾರೆ.
ಟನ್‌ಗೆ 1 ಸಾವಿರ ರೂ. ಲಾಭ | ಕರೀಗೌಡ
ಸಿಮೆಂಟ್ ಕಾರ್ಖಾನೆಗೆ ಎಲ್‌ವಿಪಿ ನೀಡುವುದರಿಂದ ಅವರು ‘ಎಕ್ಸ್‌ಟೆನ್‌ಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ’ (ಇಪಿಆರ್) ಅನ್ನು ಬಿಎಸ್‌ಡಬ್ಲ್ಯುಎಂಎಲ್‌ಗೆ ನೀಡಲಿದ್ದಾರೆ. ಇದನ್ನು ತಂಪುಪಾನೀಯ ಸೇರಿದಂತೆ ಪ್ಲಾಸ್ಟಿಕ್ ಬಳಸುವ ಕಂಪನಿಗಳಿಗೆ ನಾವು ಮಾರಾಟ ಮಾಡಬಹುದು. ಪ್ರತಿ ಟನ್‌ಗೆ 1 ಸಾವಿರ ರೂ. ಲಾಭ ಬರುವ ನಿರೀಕ್ಷೆ ಇದೆ. ಈ ಮೂಲಕ ಜಿಬಿಎಗೆ ವಾರ್ಷಿಕ ಕೋಟ್ಯಂತರ ಹಣ ಅದಾಯ ಬರಲಿದೆ.
ಇನ್ನು, ಪ್ಲಾಸ್ಟಿಕ್ ಬಳಸುವ ಕಂಪನಿಗಳಿಗೆ ಅವುಗಳನ್ನು ಸಂಸ್ಕರಿಸುವ ಜವಾಬ್ದಾರಿಯೂ ಇರುತ್ತದೆ. ಅದನ್ನು ಅವರು ನೇರವಾಗಿ ಮಾಡದಿದ್ದರೂ ಇಪಿಆರ್ ಪಡೆದವರಿಂದ ಅದನ್ನು ಖರೀದಿಸಿ ಜವಾಬ್ದಾರಿ ನಿರ್ವಹಿಸಬಹುದು. ಕಟ್ಟಡಗಳ ಟಿಡಿಆರ್‌ನಂತೆ ನಾವು ಇಪಿಆರ್ ಅನ್ನು ಬಳಸಬಹುದು. ಕಡಪಗೆ ನಾವು ತ್ಯಾಜ್ಯವನ್ನು ಸಾಗಿಸಲು ಪ್ರತಿ ಟನ್‌ಗೆ 1 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಬೃಹತ್ ಕಾಂಪ್ಯಾಕ್ಟರ್‌ಗಳನ್ನು ಬಳಸಲು ಟೆಂಡರ್ ಕರೆಯಲಾಗಿದೆ. ಲೋಡಿಂಗ್ ಮತ್ತು ಅನ್‌ಲೋಡಿಂಗ್ ಸಿಮೆಂಟ್ ಕಂಪನಿಯವರದ್ದೇ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆಗೆ ನಟ ವಿಜಯ್ ಸಿಎಂ ಅಭ್ಯರ್ಥಿ | TVK ಅಧಿಕೃತ ಘೋಷಣೆ


















