ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಇಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪ್ರಕಾಶ್ ವೀರ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ಆರಂಭಿಕವಾಗಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ.
ಪೋಸ್ಟರ್ಸ್, ಗ್ಲಿಂಪ್ಸ್, ಹಾಡುಗಳು, ಮೇಕಿಂಗ್ ವಿಡಿಯೋ ಹಾಗೂ ಟ್ರೇಲರ್ನಿಂದಲೇ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ಇಂದು ಮುಂಜಾನೆ 6:30ರ ಮಾರ್ನಿಂಗ್ ಶೋನೊಂದಿಗೆ ಶುಭಾರಂಭ ಕಂಡಿದೆ. ಅಭಿಮಾನಿಗಳು ಡೆವಿಲ್ ಸಿನಿಮಾ ಸಂಭ್ರಮವನ್ನು ಕಳೆದ ರಾತ್ರಿಯಿಂದಲೇ ಶುರು ಮಾಡಿಕೊಂಡಿದ್ದಾರೆ. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ಜನಪ್ರಿಯ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 6.30ಕ್ಕೆ ಶೋ ಆರಂಭ ಕಂಡಿದ್ದು, ನಾಯಕ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಚಿತ್ರದ ನಾಯಕ ನಟಿ ರಚನಾ ರೈ ಹಾಗೂ ದರ್ಶನ್ ಆಪ್ತ, ನಟ ಧನ್ವೀರ್ ಆಗಮಿಸಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸಿದರು. ಈ ಹಿನ್ನೆಲೆ, ನರ್ತಕಿ ಚಿತ್ರಮಂದಿರದ ಬಳಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರು. ಬೆಂಗಳೂರಿನ ಎಲ್ಲಾ ಚಿತ್ರಮಂದಿರಗಳ ಬಳಿ ಅಭಿಮಾನಿ ಸಾಗರ ಬಂದು ಸೇರಿದೆ.
ಚಿತ್ರದಲ್ಲಿ ದರ್ಶನ್ ತೂಗುದೀಪ ಅವರಿಗೆ ಜೋಡಿಯಾಗಿ ರಚನಾ ರೈ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇವರ ಜೊತೆಗೆ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ, ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ್ ಪ್ರಭು, ಶೋಭ್ ರಾಜ್, ಹುಲಿ ಕಾರ್ತಿಕ್, ಸೋನಿಯಾ, ಯುವರಾಜ್ ಸೇರಿ ಹಲವರು ನಟಿಸಿದ್ದಾರೆ.
ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ ದಿ ಡೆವಿಲ್ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ. ಕಾಂತರಾಜ್ ಸಂಭಾಷಣೆ ಬರೆದಿದ್ದಾರೆ. ತಶ್ವಿನಿ ವೀರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಶ್ವಿನಿ ವೀರ್ ಹಾಗೂ ಚೇತನ್ ರಾ ಚಿತ್ರದ ಕಾಸ್ಟ್ಯೂಮ್ ಡಿಸೈನರ್ಸ್.
ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಡಿ ಬಿಗ್ ಬಜೆಟ್ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ದಿ ಡೆವಿಲ್ ಅಂದುಕೊಂಡಂತೆ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಈ ವರ್ಷದ ಹಿಟ್ ಸಾಲಿಗೆ ಸೇರುತ್ತಾ ಅನ್ನೋದು ಒಂದೆರಡು ದಿನಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ : ಕಾಂಗ್ರೆಸ್ ಮುಖಂಡ ಗಣೇಶ್ ಹತ್ಯೆ ಕೇಸ್ | ತಲೆಮರೆಸಿಕೊಂಡಿದ್ದ 6 ಮಂದಿ ಆರೋಪಿಗಳು ಮಧುರೈನಲ್ಲಿ ಅರೆಸ್ಟ್!



















