ಬೆಳಗಾವಿ : ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ಟಿಒ) ಮಧ್ಯವರ್ತಿಗಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಯಾಗಿಸಿ ಅವರನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್ಟಿಒನಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಪರವಾನಗಿ, ಕಲಿಕಾ ಪರವಾನಗಿ ಸೇರಿದಂತೆ 24 ಸೇವೆಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಅವಕಾಶ ಕಲ್ಪಿಸುವಂತೆ ಮಾಡಲಾಗಿದೆ. ಆದಾಗ್ಯೂ ಆರ್ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳು ಇರುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಜವಾಬ್ದಾರಿಯನ್ನಾಗಿ ಮಾಡಿ ಅಮಾನತುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು, ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕಚೇರಿಯ ಅಧಿಕಾರಿ ಅಥವಾ ಸಿಬ್ಬಂದಿಗಳನ್ನು ಭೇಟಿ ಮಾಡಿ, ಅವರ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದು ಆರ್ಟಿಒ ಕಚೇರಿಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಕೇಂದ್ರದಿಂದ ರಾಜ್ಯಕ್ಕೆ ಎಲೆಕ್ಟ್ರಿಕಲ್ ಬಸ್‍ಗಳ ಹಂಚಿಕೆಗೆ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆ ಮಾಡಲಾದ ಎಲೆಕ್ಟ್ರಿಕ್ ಬಸ್‍ಗಳ ಕಾರ್ಯಕ್ಷಮತೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಸಾರ್ವಜನಿಕ ಸುಗಮ ಸಂಚಾರಕ್ಕೆ ಎಲೆಕ್ಟ್ರಿಕ್ ಬಸ್‍ಗಳ ವ್ಯತ್ಯಯ ಉಂಟಾದಾಗ ಸಂಸ್ಥೆಯ ಡಿಸೇಲ್ ಬಸ್ಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ಷಮತೆಯನ್ನು ಸಾಧಿಸದ ಅಂಶಗಳಿಗೆ ಕರಾರು ಒಪ್ಪಂದದಲ್ಲಿ ದಂಡ ವಿಧಿಸಲಾಗಿದೆ ಎಂದರು.
ಇದನ್ನೂ ಓದಿ : ತಿರುಪತಿಯಲ್ಲಿ ಮತ್ತೊಂದು ದೊಡ್ಡ ಹಗರಣ | ರೇಷ್ಮೆ ಶಲ್ಯಗಳ ಪೂರೈಕೆಯಲ್ಲಿ 54 ಕೋಟಿ ಗೋಲ್ಮಾಲ್ | ACB ತನಿಖೆಗೆ ಆಗ್ರಹ



















