ಭೋಪಾಲ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಯ ಶೈಲಿಯ ಮಸೀದಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯ ಹಿಂದೂ ಸಂಘಟನೆಯೊಂದು ಭೋಪಾಲ್‌ನಲ್ಲಿ ನಡೆಸಲು ಯತ್ನಿಸಿದ ವಿನೂತನ ಪ್ರತಿಭಟನೆ, ನಂತರ ವಿವಾದದ ಸ್ವರೂಪ ಪಡೆದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ಕೂಡ ನಡೆದಿದೆ. ಈ ವೇಳೆ ಪ್ರತಿಭಟನಾಕಾರರ ಕೈಯಿಂದ ಮೊಘಲ್ ಚಕ್ರವರ್ತಿ ಬಾಬರ್‌ನ ಹೆಸರಿನ ಫಲಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಗಿದ್ದೇನು?:
ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಅವರು ಮುರ್ಷಿದಾಬಾದ್‌ನಲ್ಲಿ ಬಾಬರಿ ಶೈಲಿಯ ಮಸೀದಿಗೆ ಅಡಿಪಾಯ ಹಾಕಿದ್ದನ್ನು ವಿರೋಧಿಸಿ ಹಿಂದೂ ಉತ್ಸವ ಸಮಿತಿ ನಗರದ ಸೆಕೆಂಡ್ ಸ್ಟಾಪ್ ಪ್ರದೇಶದಲ್ಲಿ ಜಮಾಯಿಸಿತ್ತು. ಈ ಗುಂಪು ಒಂದು ಸಾರ್ವಜನಿಕ ಸುಲಭ್ ಶೌಚಾಲಯಕ್ಕೆ ಸಾಂಕೇತಿಕವಾಗಿ “ಬಾಬರ್ ಸುಲಭ್ ಟಾಯ್ಲೆಟ್” ಎಂದು ಮರುನಾಮಕರಣ ಮಾಡಲು ಯತ್ನಿಸಿತು.
ಪೊಲೀಸರ ಮಧ್ಯಪ್ರವೇಶ:
ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪ್ರತಿಭಟನಾಕಾರರು ಶೌಚಾಲಯ ಸಂಕೀರ್ಣದತ್ತ ಸಾಗುತ್ತಿದ್ದಾಗ ಅವರನ್ನು ತಡೆದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಕಾರ್ಯಕರ್ತರ ನಡುವೆ ಕೆಲಕಾಲ ತಳ್ಳಾಟ ಮತ್ತು ವಾಗ್ವಾದ ನಡೆಯಿತು. ನಂತರ ಪೊಲೀಸರು “ಬಾಬರ್ ಸುಲಭ್ ಟಾಯ್ಲೆಟ್” ಮತ್ತು ಬಾಬರ್ ಹೆಸರಿನ ಮತ್ತೊಂದು ಫಲಕವನ್ನು ವಶಪಡಿಸಿಕೊಂಡು ಗುಂಪನ್ನು ಚದುರಿಸಿದರು.
ಹಿಂದೂ ಸಂಘಟನೆ ಆಕ್ರೋಶ:
ಹಿಂದೂ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ತಿವಾರಿ ಅವರು, “ಬಾಬರ್ ಹೆಸರಿನಲ್ಲಿ ಮಸೀದಿಯನ್ನು ನಿರ್ಮಿಸುವುದನ್ನು ನಾವು ಸಹಿಸುವುದಿಲ್ಲ. ಯಾರಾದರೂ ಮಸೀದಿ ನಿರ್ಮಿಸಲು ಬಯಸಿದರೆ, ಅದನ್ನು ಅಬ್ದುಲ್ ಕಲಾಂ ಅಥವಾ ಅಶ್ಫಾಖುಲ್ಲಾ ಹೆಸರಿನಲ್ಲಿ ನಿರ್ಮಿಸಲಿ” ಎಂದು ಹೇಳಿದ್ದಾರೆ.
ಬಂಗಾಳದಲ್ಲಿ ಉದ್ವಿಗ್ನತೆ:
ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದಂದು (ಡಿಸೆಂಬರ್ 6) ಶಾಸಕ ಹುಮಾಯೂನ್ ಕಬೀರ್ ಅವರು ಬಾಬರಿ ಮಸೀದಿಯ ಶೈಲಿಯ ರಚನೆಗೆ ಅಡಿಗಲ್ಲು ಹಾಕಿದ ನಂತರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕಬೀರ್ ಅವರನ್ನು ಕಳೆದ ವಾರ ತೃಣಮೂಲ ಕಾಂಗ್ರೆಸ್ ಅಮಾನತುಗೊಳಿಸಿದೆ.
ಇನ್ನು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದು, ಕೋಮು ಸೌಹಾರ್ದತೆಯ ಸಂದೇಶವನ್ನು ಹರಡಲು ‘ಸಮಹತಿ ದಿವಸ್’ (ಏಕತಾ ದಿನ) ಆಚರಿಸಲು ನಿರ್ಧರಿಸಿದೆ.
ಇದನ್ನೂ ಓದಿ : ಪ್ರಯಾಣಿಕರಿಗೆ ಕ್ಷಮೆಯಾಚನೆ ರೂಪದಲ್ಲಿ ಇಂಡಿಗೋ ನೀಡಿದ್ದೇನು? ವೈರಲ್ ಆಯ್ತು ವಿಡಿಯೋ!



















