ಬ್ರಸೆಲ್ಸ್: 13,850 ಕೋಟಿ ರೂ. ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಂಚನೆ ಪ್ರಕರಣದ ಪ್ರಮುಖ ಆರೋಪಿ, ಭಾರತೀಯ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ಬೆಲ್ಜಿಯಂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ಚೋಕ್ಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದು ಸಿಬಿಐ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಹೀಗಾಗಿ, ಚೋಕ್ಸಿ ಗಡೀಪಾರಾಗುವ ಕಾಲ ಸನ್ನಿಹಿತವಾದಂತಾಗಿದೆ.
ಕಳೆದ ಅಕ್ಟೋಬರ್ 17 ರಂದು ಆಂಟ್‌ವರ್ಪ್ ಕೋರ್ಟ್ ಆಫ್ ಅಪೀಲ್ಸ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಚೋಕ್ಸಿ ಅಕ್ಟೋಬರ್ 30 ರಂದು ಬೆಲ್ಜಿಯಂನ ಉನ್ನತ ನ್ಯಾಯಾಲಯ (ಕೋರ್ಟ್ ಆಫ್ ಕ್ಯಾಸೇಷನ್) ಮೊರೆ ಹೋಗಿದ್ದರು.
ಕೋರ್ಟ್ ಆಫ್ ಕ್ಯಾಸೇಷನ್‌ನ ವಕ್ತಾರರಾದ ಅಡ್ವೊಕಾಟ್-ಜನರಲ್ ಹೆನ್ರಿ ವಾಂಡರ್ಲಿಂಡೆನ್, “ಅವರ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದ್ದರಿಂದ, ಮೇಲ್ಮನವಿ ನ್ಯಾಯಾಲಯದ ರ್ಧಾರವೇ ಅಂತಿಮ” ಎಂದು ಹೇಳಿದ್ದಾರೆ.
ಭಾರತಕ್ಕೆ ಹಸ್ತಾಂತರಿಸಿದರೆ, ಚೋಕ್ಸಿಗೆ ನ್ಯಾಯಯುತ ವಿಚಾರಣೆಯ ನಿರಾಕರಣೆ ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವ ಯಾವುದೇ ಅಪಾಯ ಇಲ್ಲ ಎಂದು ಆಂಟ್‌ವರ್ಪ್ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು.
ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಅಂತರರಾಷ್ಟ್ರೀಯ ಕಾನೂನುಗಳನ್ನು ಪಾಲಿಸುವುದಿಲ್ಲ ಎಂಬ ಚೋಕ್ಸಿಯ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದ್ದು, ಚಿತ್ರಹಿಂಸೆ ಅಥವಾ ನ್ಯಾಯ ನಿರಾಕರಣೆಯ “ನಿಜವಾದ ಅಪಾಯದ” ಕುರಿತು “ಸಮರ್ಪಕವಾಗಿ ತೋರಿಕೆಯ” ಪುರಾವೆಗಳನ್ನು ನೀಡುವಲ್ಲಿ ಚೋಕ್ಸಿ ವಿಫಲರಾಗಿದ್ದಾರೆ ಎಂದು ಕೋರ್ಟ್ ಆಫ್ ಅಪೀಲ್ಸ್ ಅಭಿಪ್ರಾಯಪಟ್ಟಿದೆ.
ಬ್ಯಾರಕ್ 12ರ ಚಿತ್ರಗಳು:
ಭಾರತೀಯ ಜೈಲುಗಳು ಕಿಕ್ಕಿರಿದಿವೆ, ಅಪಾಯಕಾರಿಯಾಗಿವೆ ಎಂಬ ಚೋಕ್ಸಿಯ ಆರೋಪಗಳನ್ನು ತಳ್ಳಿಹಾಕಲು, ಭಾರತೀಯ ತನಿಖಾ ಸಂಸ್ಥೆಗಳು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಬ್ಯಾರಕ್ ಸಂಖ್ಯೆ 12ರ (ಹಸ್ತಾಂತರವಾದ ನಂತರ ಚೋಕ್ಸಿಯನ್ನು ಅಲ್ಲಿ ಇರಿಸಲಾಗುವುದು) ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದವು. ಈ 46 ಚದರ ಮೀಟರ್ ಬ್ಯಾರಕ್‌ನಲ್ಲಿ ಖಾಸಗಿ ಶೌಚಾಲಯಗಳು ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ಎರಡು ಕೋಣೆಗಳಿವೆ ಎಂದು ತಿಳಿಸಲಾಗಿತ್ತು.
ಚೋಕ್ಸಿ ಆರೋಪಕ್ಕೆ ಸೊಪ್ಪು ಹಾಕದ ಕೋರ್ಟ್:
ಬೆಲ್ಜಿಯಂ ನ್ಯಾಯಾಲಯವು ಚೋಕ್ಸಿಯ ರಾಜಕೀಯ ಕಿರುಕುಳದ ಆರೋಪಗಳನ್ನು ಕೂಡ ತಳ್ಳಿಹಾಕಿದೆ. ಅಪರಾಧಗಳನ್ನು “ರಾಜಕೀಯ, ಮಿಲಿಟರಿ ಅಥವಾ ಹಸ್ತಾಂತರಿಸಲಾಗದ ತೆರಿಗೆ ಅಪರಾಧಗಳು ಎಂದು ಪರಿಗಣಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ಚೋಕ್ಸಿ ಜಾತಿ, ಧರ್ಮ, ರಾಷ್ಟ್ರೀಯತೆ ಅಥವಾ ರಾಜಕೀಯ ಸಂಬಂಧಕ್ಕಾಗಿ ವಿಚಾರಣೆ ಅಥವಾ ಶಿಕ್ಷೆಗೆ ಗುರಿಪಡಿಸಲು ಈ ವಿನಂತಿಯನ್ನು ಮಾಡಲಾಗಿದೆ ಎಂದು ನಂಬಲು ಯಾವುದೇ ಆಧಾರಗಳಿಲ್ಲ ಎಂದಿದೆ.
ಇದನೂ ಓದಿ : ಪ್ರೇಮಿಗಳಿಗೆ ಪೋಷಕರ ಅಡ್ಡಿ | ಠಾಣೆಯಲ್ಲೇ ಪ್ರೇಮ ವಿವಾಹ



















