ಫರೀದ್‌ಕೋಟ್: ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಕೂಲಿ ಕಾರ್ಮಿಕರ ಕುಟುಂಬವೊಂದಕ್ಕೆ ಇತ್ತೀಚೆಗೆ ಬಂದ ಜಾಕ್‌ಪಾಟ್‌ನ ಸಂತಸವು ಈಗ ಭಯ ಮತ್ತು ಆತಂಕಕ್ಕೆ ತಿರುಗಿದೆ. ಪಂಜಾಬ್ ರಾಜ್ಯ ಲಾಟರಿಯಲ್ಲಿ 1.5 ಕೋಟಿ ರೂ. ಬಹುಮಾನ ಗೆದ್ದ ಈ ಕುಟುಂಬ, ಲೂಟಿ ಮತ್ತು ಅಪಹರಣದ ಭಯದಿಂದ ತಮ್ಮ ಮನೆಯನ್ನು ತೊರೆದು ರಹಸ್ಯ ಸ್ಥಳಕ್ಕೆ ತೆರಳಿದೆ.
ನಸೀಬ್ ಕೌರ್ ಮತ್ತು ಅವರ ಪತಿ ರಾಮ್ ಸಿಂಗ್, ಫರೀದ್‌ಕೋಟ್ ಜಿಲ್ಲೆಯ ಸೈದೆಕೆ ಗ್ರಾಮದ ದೈನಂದಿನ ಕೃಷಿ ಕಾರ್ಮಿಕರು. ಇವರು ಕೇವಲ 200 ರೂಪಾಯಿಗೆ ಖರೀದಿಸಿದ್ದ ಲಾಟರಿ ಟಿಕೆಟ್ ಇವರ ಅದೃಷ್ಟವನ್ನೇ ಖುಲಾಯಿಸಿತು. ಇತ್ತೀಚೆಗೆ ಲಾಟರಿ ಡ್ರಾ ಆಗಿದ್ದು, ಪಂಜಾಬ್ ರಾಜ್ಯ ಲಾಟರಿಯಲ್ಲಿ ಈ ದಂಪತಿ 1.5 ಕೋಟಿ ರೂ. ಗೆದ್ದರು.
ಈ ದೊಡ್ಡ ಮೊತ್ತದ ಗೆಲುವಿನ ಸುದ್ದಿ ನೆರೆಹೊರೆಯಲ್ಲಿ ಹರಡುತ್ತಿದ್ದಂತೆ, ಅಪರಾಧಿಗಳು ತಮ್ಮನ್ನು ಗುರಿಯಾಗಿಸಬಹುದು ಅಥವಾ ಸುಲಿಗೆಗೆ ಯತ್ನಿಸಬಹುದು ಎಂಬ ಆತಂಕ ಕುಟುಂಬವನ್ನು ಆವರಿಸತೊಡಗಿತು.
ಹೀಗಾಗಿ, ತಮ್ಮ ಸುರಕ್ಷತೆಯ ದೃಷ್ಟಿಯಿಂದ, ಕುಟುಂಬವು ಮನೆಗೆ ಬೀಗ ಜಡಿದು, ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ, ರಹಸ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.
ಪೊಲೀಸ್ ಭರವಸೆ:
ಮಂಗಳವಾರ ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಫರೀದ್‌ಕೋಟ್ ಪೊಲೀಸರು, ಕುಟುಂಬವನ್ನು ಸಂಪರ್ಕಿಸಿ ಧೈರ್ಯ ಮತ್ತು ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಉಪ ಪೊಲೀಸ್ ಅಧೀಕ್ಷಕ ತರ್ಲೋಚನ್ ಸಿಂಗ್, “ಸುಮಾರು 15-20 ದಿನಗಳ ಹಿಂದೆ ನಸೀಬ್ ಕೌರ್ ಎಂಬ ಮಹಿಳೆ 200 ರೂ. ಲಾಟರಿ ಟಿಕೆಟ್ ಖರೀದಿಸಿ 1.5 ಕೋಟಿ ಬಹುಮಾನ ಗೆದ್ದಿರುವ ವಿಷಯ ಇಂದು ನಮಗೆ ತಿಳಿಯಿತು. ಆದರೆ, ತಮಗೆ ಯಾರಾದರೂ ಹಾನಿ ಮಾಡಬಹುದು ಅಥವಾ ಸುಲಿಗೆಗೆ ಯತ್ನಿಸಬಹುದು ಎಂಬ ಭಯವನ್ನು ಕುಟುಂಬ ವ್ಯಕ್ತಪಡಿಸಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಯಾವಾಗಲೂ ಇರುತ್ತಾರೆ ಮತ್ತು ಅವರ ಕುಟುಂಬಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ | ಸಿಗದ ಸರಕಾರಿ ನೌಕರಿ.. ನಿರುದ್ಯೋಗಿ ಯುವಕ ಆತ್ಮಹತ್ಯೆ



















