ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಟನೆಯ ಮೊದಲ ತೆಲುಗು ಸಿನಿಮಾದ ಮುಹೂರ್ತ ಇಂದು ನೆರವೇರಿದೆ. 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಸರಳ ಜೀವನ ನಡೆಸಿದ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಸಿನಿಮಾಗೆ ಆಂಧ್ರದಲ್ಲಿ ಮುಹೂರ್ತ ನೆರವೇರಿದೆ. ಸಿನಿಮಾಗೆ ಗುಮ್ಮಡಿ ನರಸಯ್ಯ ಎಂದು ಟೈಟಲ್ ಇಡಲಾಗಿದ್ದು, ಸರಳವಾಗಿ ಚಿತ್ರದ ಮುಹೂರ್ತ ಕೂಡ ನೆರವೇರಿದೆ.
ಮುಹೂರ್ತದಲ್ಲಿ ನಟ ಶಿವರಾಜ್‍ಕುಮಾರ್, ಪತ್ನಿ ಗೀತಾ ಶಿವರಾಜ್‍ಕುಮಾರ್ ಕೂಡಾ ಭಾಗಿಯಾಗಿದ್ದರು. ಡಾ.ರಾಜ್‍ಕುಮಾರ್, ಪಾರ್ವತಮ್ಮ ಹಾಗೂ ಅಪ್ಪು ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಬಳಿಕ ಸಿನಿಮಾದ ಮುಹೂರ್ತ ನೆರವೇರಿಸಲಾಗಿದೆ. ನಟ ಶಿವರಾಜ್‍ಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಮೊದಲ ತೆಲುಗು ಸಿನಿಮಾ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಈಗಾಗಲೇ ಸಿನಿಮಾ ಫಸ್ಟ್‍ಲುಕ್ ಟೀಸರ್ ರಿಲೀಸ್ ಆಗಿದ್ದು, ಈ ಸಿನಿಮಾದಲ್ಲಿ ಶಿವಣ್ಣನ ಪಾತ್ರ ಪರಿಚಯವಾಗಿದೆ.

ಇನ್ನು ಸಿನಿಮಾದ ಮುಹೂರ್ತಕ್ಕಿಂತ ಮೊದಲು ಡಿ.5ರಂದು ಆಂಧ್ರ ಪ್ರದೇಶದ ಗುಮ್ಮಡಿ ನರಸಯ್ಯ ಅವರ ಮನೆಗೆ ನಟ ಶಿವರಾಜ್‍ಕುಮಾರ್ ಹಾಗೂ ಗೀತಾ ಶಿವರಾಜ್‍ಕುಮಾರ್ ಭೇಟಿ ನೀಡಿದ್ದರು. ಗುಮ್ಮಡಿ ನರಸಯ್ಯ ಅವರ ಕುಟುಂಬವನ್ನು ಭೇಟಿ ಮಾಡಿ ಮಾತನಾಡಿದ್ದರು. ಬಳಿಕ ಇಂದು ಮುಹೂರ್ತದಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾವನ್ನು ಪರಮೇಶ್ವರ್ ಹಿವ್ರಾಲೆ ನಿರ್ದೇಶನ ಮಾಡುತ್ತಿದ್ದಾರೆ, ಎನ್ ಸುರೇಶ್ ರೆಡ್ಡಿ ಈ ಸಿನಿಮಾಗ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಪ್ತಪದಿ ತುಳಿದ ʼನೀನಾದೆ ನಾʼ ಧಾರವಾಹಿ ಖ್ಯಾತಿಯ ಅರುಣ್ ಕುಮಾರ್



















