ಬೆಂಗಳೂರು: ದೇಶದ ಲಕ್ಷಾಂತರ ಜನರಿಗೆ ಕಳೆದ ಒಂದು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಸಿಹಿ ಸುದ್ದಿಗಳನ್ನು ನೀಡಿದೆ. ಕಳೆದ ಒಂದು ವರ್ಷದಲ್ಲಿ ಆರ್ ಬಿಐ (RBI) ರೆಪೊ ದರದಲ್ಲಿ 125 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದೆ. ಇದರಿಂದಾಗಿ ಗೃಹ ಸಾಲ, ವಾಹನ ಸಾಲ ಸೇರಿ ಹಲವು ರೀತಿಯ ಸಾಲ ಮಾಡಿದವರು ವರ್ಷಕ್ಕೆ 45 ಸಾವಿರ ರೂ. ಉಳಿತಾಯ ಮಾಡಲು ಸಾಧ್ಯವಾಗಿದೆ. ಹೇಗೆ ಅಂತೀರಾ? ಲೆಕ್ಕಾಚಾರ ಇಲ್ಲಿದೆ.
ಹೌದು, ನೀವೇನಾದರೂ 50 ಲಕ್ಷ ರೂಪಾಯಿಯನ್ನು ಮನೆ ಸಾಲವಾಗಿ ಪಡೆದುಕೊಂಡಿದ್ದರೆ, ಆರ್ ಬಿಐ ರೆಪೊ ದರ ಇಳಿಕೆಯಿಂದ ನಿಮಗೆ ವರ್ಷಕ್ಕೆ 45 ಸಾವಿರ ರೂಪಾಯಿ ಇಎಂಐ ಹಣ ಉಳಿಯಲಿದೆ. ನೀವು, 50 ಲಕ್ಷ ರೂಪಾಯಿಯನ್ನು ಗೃಹ ಸಾಲವಾಗಿ ಶೇ.8.5ರ ಬಡ್ಡಿದರದಲ್ಲಿ ಪಡೆದಿದ್ದರೆ, ಇದರಿಂದ ನಿಮಗೆ ಹಣದ ಉಳಿತಾಯವಾಗಲಿದೆ.
50 ಲಕ್ಷ ರೂಪಾಯಿ ಗೃಹ ಸಾಲಕ್ಕೆ ಶೇ.8.5ರ ಬಡ್ಡಿದರ ಎಂದರೆ ತಿಂಗಳಿಗೆ 43,391 ರೂಪಾಯಿ ಇಎಂಐ ಕಟ್ಟಬೇಕು. ಕಳೆದ ಒಂದು ವರ್ಷದಲ್ಲಿ 125 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದೆ. ಬ್ಯಾಂಕುಗಳು ಕೂಡ ಇಷ್ಟೇ ಪಾಯಿಂಟ್ ಇಳಿಸಿದರೆ (ಬಹುತೇಕ ಬ್ಯಾಂಕುಗಳು ಇಳಿಕೆ ಮಾಡಿವೆ) ನೀವು ಈಗ ಮಾಸಿಕ 39,519 ರೂಪಾಯಿ ಇಎಂಐ ಕಟ್ಟಬೇಕು. ಅಂದರೆ, ನಿಮಗೆ ತಿಂಗಳಿಗೆ 3,872 ರೂಪಾಯಿ ಉಳಿಯಿತು. ವರ್ಷಕ್ಕೆ 45 ಸಾವಿರ ರೂ. ಉಳಿದಂತೆ ಆಯಿತು.
ಹೀಗೆಯೇ, ವರ್ಷಕ್ಕೆ 45 ಸಾವಿರ ರೂಪಾಯಿ ಉಳಿದರೆ, ನೀವು ಸಾಲ ತೀರಿಸುವಷ್ಟರಲ್ಲಿ 9 ಲಕ್ಷ ರೂಪಾಯಿ ಉಳಿಸಿದಂತೆ ಆಗುತ್ತದೆ. ಅಲ್ಲದೆ ನೀವು 240 ತಿಂಗಳು ಇಎಂಐ ಕಟ್ಟುವ ಬದಲು 198 ತಿಂಗಳು ಇಎಂಐ ಕಟ್ಟಿದಂತೆ ಆಗುತ್ತದೆ. ಹಾಗಾಗಿ, ಆರ್ ಬಿಐ ರೆಪೊ ದರವನ್ನು ಇಳಿಸಿರುವುದು ಸಾಲಗಾರರಿಗೆ ಸಿಹಿ ಸುದ್ದಿ ಎನಿಸಿದೆ.
ಇದನ್ನೂ ಓದಿ: ಆರ್ಯಭಟ ಸಂಶೋಧನಾ ಸಂಸ್ಥೆಯಲ್ಲಿ 3 ಹುದ್ದೆಗಳ ನೇಮಕ : ಬೆಂಗಳೂರಿನಲ್ಲೇ ಉದ್ಯೋಗ



















