ಬೋಧ್ಗಯಾ : ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವರ ಹಾಗೂ ವಧುವಿನ ಕುಟುಂಬದ ನಡುವೆ ಒಂದೋ ವರದಕ್ಷಿಣೆ ವಿಚಾರಕ್ಕೆ ಇಲ್ಲವೋ ಊಟದ ವಿಚಾರಕ್ಕೆ ಜಗಳವಾಗುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ಕೇವಲ ರಸಗುಲ್ಲ ಕಡಿಮೆಯಾಗಿದೆ ಎಂಬ ಕಾರಣಕ್ಕೆ 2 ಕುಟುಂಬದವರ ನಡುವೆ ದೊಡ್ಡ ಕಲಹವೇ ಏರ್ಪಟ್ಟಿದೆ.
ಈ ಘಟನೆ ಬಿಹಾರದ ಬೋಧ್‌ಗಯಾನಲ್ಲಿ ನಡೆದಿದ್ದು, ಕೊನೆಗೆ ಮದುವೆಯೇ ರದ್ದಾಗಿದೆ. ರಸಗುಲ್ಲಕ್ಕಾಗಿ ಅತಿಥಿಗಳು ಮದುವೆ ಸಮಾರಂಭ ಎಂಬುದನ್ನು ಮರೆತು ಪರಸ್ಪರ ಕಿತ್ತಾಟ ನಡೆಸುತ್ತಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಮದುವೆ ಸಮಾರಂಭದಲ್ಲಿ ವಧು ಮತ್ತು ವರನ ಕಡೆಯ ಕುಟುಂಬದವರು ಮತ್ತು ಅತಿಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ತಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕೆಲವರು ಕೆಂಪು ಪ್ಲಾಸ್ಟಿಕ್ ಕುರ್ಚಿಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿದ್ದಾರೆ. ಇತರ ಸಣ್ಣ ಪುಟ್ಟ ವಸ್ತುಗಳನ್ನು ಬಳಸಿ ಪರಸ್ಪರ ಕಿತ್ತಾಡುವುದನ್ನು ದೃಶ್ಯದಲ್ಲಿ ಕಾಣಬಹುದು.
ರಸಗುಲ್ಲ ಕೊರತೆಯಿಂದಾಗಿ ಮದುವೆ ರದ್ದಾದ ನಂತರ ವಧುವಿನ ಕುಟುಂಬದವರು ವರನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಜೆಸಿಬಿಗಳ ಘರ್ಜನೆ | ಅಕ್ರಮವಾಗಿ ಕಟ್ಟಿದ್ದ 47 ಮನೆಗಳು ನೆಲಸಮ


















