ರಾಯ್ಪುರದಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಏಡೆನ್ ಮಾರ್ಕ್ರಮ್ ಅಮೋಘ ಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. 98 ಎಸೆತಗಳಲ್ಲಿ 110 ರನ್ ಗಳಿಸಿದ ಮಾರ್ಕ್ರಮ್, ಭಾರತ ತಂಡ ನೀಡಿದ್ದ 359 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ದಶಕದ ನಂತರ ಆರಂಭಿಕನ ಶತಕ
ಮಾರ್ಕ್ರಮ್ ಅವರ ಈ ಶತಕ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ವಿಶೇಷವಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತದ ನೆಲದಲ್ಲಿ ಏಕದಿನ ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 2015ರಲ್ಲಿ ಕ್ವಿಂಟನ್ ಡಿ ಕಾಕ್ ಅವರು ಭಾರತದಲ್ಲಿ ಶತಕ ಬಾರಿಸಿದ್ದರು, ಅದಾದ ನಂತರ ಯಾವೊಬ್ಬ ದಕ್ಷಿಣ ಆಫ್ರಿಕಾ ಆರಂಭಿಕನಿಗೂ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ವಿಶೇಷವೆಂದರೆ, ಆರಂಭಿಕನಾಗಿ ಕಣಕ್ಕಿಳಿದು ಕಳೆದ 25 ಇನ್ನಿಂಗ್ಸ್‌ಗಳಲ್ಲಿ ಇದು ಮಾರ್ಕ್ರಮ್ ಅವರ ಮೊದಲ ಶತಕವಾಗಿದೆ. ಅವರ ಹಿಂದಿನ ಮೂರು ಶತಕಗಳು 4ನೇ ಕ್ರಮಾಂಕದಲ್ಲಿ ಬಂದಿದ್ದವು.

ಪಂದ್ಯದ ತಿರುವು ಮತ್ತು ಮಾರ್ಕ್ರಮ್ ಆಟ
ಕ್ವಿಂಟನ್ ಡಿ ಕಾಕ್ (8 ರನ್) ಆರಂಭದಲ್ಲೇ ಔಟಾದರೂ, ಮಾರ್ಕ್ರಮ್ ಎದೆಗುಂದಲಿಲ್ಲ. ನಾಯಕ ತೆಂಬಾ ಬವೂಮಾ (46 ರನ್) ಅವರೊಂದಿಗೆ ಸೇರಿ ಎರಡನೇ ವಿಕೆಟ್‌ಗೆ 101 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಇಬ್ಬನಿ ಬೀಳಲಾರಂಭಿಸಿದ ನಂತರ ಬ್ಯಾಟಿಂಗ್‌ಗೆ ಅನುಕೂಲಕರವಾದ ವಾತಾವರಣವನ್ನು ಬಳಸಿಕೊಂಡ ಮಾರ್ಕ್ರಮ್, 88 ಎಸೆತಗಳಲ್ಲಿ ಶತಕ ಪೂರೈಸಿದರು. ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಸ್ಟ್ರೈಟ್ ಡ್ರೈವ್ ಬಾರಿಸಿ ಸಿಂಗಲ್ ಪಡೆಯುವ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು.
ಅಂತಿಮವಾಗಿ 30ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಅವರ ಆಫ್ ಕಟ್ಟರ್ ಎಸೆತದಲ್ಲಿ ಲಾಂಗ್ ಆನ್‌ನಲ್ಲಿದ್ದ ಋತುರಾಜ್ ಗಾಯಕ್ವಾಡ್‌ಗೆ ಕ್ಯಾಚ್ ನೀಡಿ ಮಾರ್ಕ್ರಮ್ ನಿರ್ಗಮಿಸಿದರು. ಆದರೂ, ಮ್ಯಾಥ್ಯೂ ಬ್ರೀಟ್ಜ್ಕೆ (68 ರನ್) ಮತ್ತು ಡೆವಾಲ್ಡ್ ಬ್ರೆವಿಸ್ (34 ಎಸೆತಗಳಲ್ಲಿ 54 ರನ್) ಅವರ ಸ್ಫೋಟಕ ಆಟದಿಂದ ದಕ್ಷಿಣ ಆಫ್ರಿಕಾ ದಾಖಲೆಯ ಚೇಸ್ ಮಾಡಿ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತು.
ಇದನ್ನೂ ಓದಿ: 7 ವರ್ಷಗಳ ಅಜೇಯ ದಾಖಲೆ ಮುರಿದ ರಾಯ್ಪುರ ಸೋಲು ; ಕೊಹ್ಲಿ ಶತಕದ ಹೊರತಾಗಿಯೂ ಭಾರತಕ್ಕೆ ನಿರಾಸೆ



















