ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ಸಂಜೆ ಭಾರತಕ್ಕೆ ಆಗಮಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಭಯ ನಾಯಕರ ಈ ಭೇಟಿಯು ರಕ್ಷಣಾ ವಲಯ, ಇಂಧನ ಭದ್ರತೆ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.
ಗುರುವಾರ ಸಂಜೆ ದೆಹಲಿಗೆ ಆಗಮಿಸಲಿರುವ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ವಿಶೇಷ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದಾರೆ. 2024ರ ಜುಲೈನಲ್ಲಿ ಮೋದಿ ಮಾಸ್ಕೋಗೆ ಭೇಟಿ ನೀಡಿದ್ದಾಗ ಪುಟಿನ್ ನೀಡಿದ್ದ ಆತ್ಮೀಯ ಆತಿಥ್ಯಕ್ಕೆ ಪ್ರತಿಯಾಗಿ ಈ ಸೌಹಾರ್ದ ಭೋಜನಕೂಟ ಆಯೋಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಅಧಿಕೃತ ಸ್ವಾಗತದ ನಂತರ, ಪುಟಿನ್ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ಸಲ್ಲಿಸಲಿದ್ದಾರೆ. ತದನಂತರ ಹೈದರಾಬಾದ್ ಹೌಸ್‌ನಲ್ಲಿ ಉಭಯ ನಾಯಕರ ನಡುವೆ ಅಧಿಕೃತ ದ್ವಿಪಕ್ಷೀಯ ಶೃಂಗಸಭೆ ನಡೆಯಲಿದೆ.
ರಕ್ಷಣಾ ಒಪ್ಪಂದಗಳ ಜಾರಿ ಮತ್ತು ಹೊಸ ಬೇಡಿಕೆ
ಉಕ್ರೇನ್ ಯುದ್ಧದ ಕಾರಣದಿಂದ ವಿಳಂಬವಾಗಿರುವ ರಕ್ಷಣಾ ಉಪಕರಣಗಳ ಪೂರೈಕೆಯನ್ನು ಚುರುಕುಗೊಳಿಸುವಂತೆ ಭಾರತ ಈ ಶೃಂಗಸಭೆಯಲ್ಲಿ ರಷ್ಯಾವನ್ನು ಒತ್ತಾಯಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಎಸ್-400 (S-400) ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಬಾಕಿ ಇರುವ ಎರಡು ಸ್ಕ್ವಾಡ್ರನ್‌ಗಳ ಪೂರೈಕೆಯು ಪ್ರಮುಖ ಅಜೆಂಡಾವಾಗಿದೆ. 2018ರಲ್ಲಿ ಮಾಡಿಕೊಂಡ ಒಪ್ಪಂದದನ್ವಯ ಐದು ಸ್ಕ್ವಾಡ್ರನ್‌ಗಳ ಪೈಕಿ ಮೂರು ಈಗಾಗಲೇ ಪೂರೈಕೆಯಾಗಿದ್ದು, ಇವುಗಳನ್ನು ‘ಆಪರೇಷನ್ ಸಿಂದೂರ’ದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗಿತ್ತು. ಇದಲ್ಲದೆ, ರಷ್ಯಾದ ಸುಖೋಯ್-57 (Su-57) ಐದನೇ ತಲೆಮಾರಿನ ಯುದ್ಧ ವಿಮಾನಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ. ಇದೇ ವೇಳೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ರಷ್ಯಾದ ಆಂಡ್ರೆ ಬೆಲೋಸೊವ್ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.
ಇಂಧನ ಭದ್ರತೆ ಮತ್ತು ಅಮೆರಿಕದ ನಿರ್ಬಂಧಗಳ ಬಿಸಿ
ಕಚ್ಚಾ ತೈಲ ಆಮದಿನ ಮೇಲೆ ಅಮೆರಿಕದ ನಿರ್ಬಂಧಗಳ ಪ್ರಭಾವ ಮತ್ತು ಇಂಧನ ಭದ್ರತೆಯು ಮಾತುಕತೆಯ ಮತ್ತೊಂದು ಪ್ರಮುಖ ಭಾಗವಾಗಲಿದೆ. ಇತ್ತೀಚೆಗೆ ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ.50ರಷ್ಟು ಮತ್ತು ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಶೇ. 25ರಷ್ಟು ಸುಂಕಗಳನ್ನು ವಿಧಿಸಿರುವುದು ಸಂಬಂಧಗಳಲ್ಲಿ ಸಣ್ಣ ಬಿರುಕು ಮೂಡಿಸಿದೆ. ಈ ಹಿನ್ನೆಲೆಯಲ್ಲಿ, ಅಮೆರಿಕದ ನಿರ್ಬಂಧಗಳ ನಡುವೆಯೂ ತೈಲ ಪೂರೈಕೆಯನ್ನು ಸುಗಮವಾಗಿಡಲು ಉಭಯ ನಾಯಕರು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಿದ್ದಾರೆ. ರಷ್ಯಾದ ತೈಲ ಆಮದು ಪ್ರಮಾಣ ಅಲ್ಪಾವಧಿಗೆ ಕುಸಿಯುವ ಸಾಧ್ಯತೆಯಿದ್ದರೂ, ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು ರಷ್ಯಾ ಬದ್ಧವಾಗಿದೆ.
ಉಕ್ರೇನ್ ಸಂಘರ್ಷದ ಕುರಿತು ಚರ್ಚೆ
ಶೃಂಗಸಭೆಯಲ್ಲಿ ಉಕ್ರೇನ್ ಸಂಘರ್ಷದ ಕುರಿತಾದ ಇತ್ತೀಚಿನ ರಾಜತಾಂತ್ರಿಕ ಬೆಳವಣಿಗೆಗಳನ್ನು ಮತ್ತು ಅಮೆರಿಕದ ನಿಲುವನ್ನು ಪುಟಿನ್ ಅವರು ಪ್ರಧಾನಿ ಮೋದಿಯವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಸಮಸ್ಯೆಗೆ ಏಕೈಕ ಪರಿಹಾರ ಎಂಬ ತನ್ನ ಹಳೆಯ ನಿಲುವನ್ನು ಭಾರತ ಪುನರುಚ್ಚರಿಸಲಿದ್ದು, ರಷ್ಯಾವನ್ನು ನೇರವಾಗಿ ಟೀಕಿಸದೆ, ಶಾಂತಿ ಸ್ಥಾಪನೆಯಲ್ಲಿ ಮಧ್ಯಸ್ಥಿಕೆ ವಹಿಸುವ ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸುವ ಸಾಧ್ಯತೆಯಿದೆ.
ಇದನ್ನುಓದಿ: ಸಿಬ್ಬಂದಿ ಕೊರತೆ ಬಿಸಿ : ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದು, ಪ್ರಯಾಣಿಕರ ಪರದಾಟ



















