ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇಗುಲದ ಆನೆ ಯಶಸ್ವಿನಿಯು ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದು ಕೆಲ ಹೊತ್ತು ಆತಂಕ ಸೃಷ್ಟಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ನೀರು ಬಂಡಿ ಉತ್ಸವದ ವೇಳೆ ಈ ಘಟನೆ ನಡೆದಿದೆ.
ಭಕ್ತರೊಂದಿಗೆ ಬೆರೆಯುತ್ತ ಆಟವಾಡುತ್ತಿದ್ದ ಯಶಸ್ವಿನಿ ಆನೆ ಇದ್ದಕ್ಕಿದ್ದಂತೆ ಅಸಾಮಾಧನಗೊಂಡಿದ್ದು, ಅಡ್ಡ ಬಂದ ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಬದಿಗೆ ಎಸೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೂ ಘಟನೆ ನಡೆದ ಕೆಲ ಕ್ಷಣದಲ್ಲೇ ಯಶಸ್ವಿನಿ ಆನೆ ಶಾಂತಾವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ. ಮಕ್ಕಳು, ಭಕ್ತರು ಆನೆಗೆ ನೀರೆರಚಿದರೆ, ಆನೆ ಸೊಂಡಿಲಿನಿಂದ ಅವರತ್ತ ನೀರು ಚಿಮುಕಿಸಿದೆ. ಸಿಬ್ಬಂದಿಗೂ ಯಾವುದೇ ಗಾಯವಾಗಿಲ್ಲ.
ಅದ್ಧೂರಿಯಾಗಿ ನೆರವೇರಿದ ಚಂಪಾ ಷಷ್ಠಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಚಂಪಾಷಷ್ಠಿ ಮಹೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪವಿತ್ರ ಕುಮಾರಧಾರಾ ನದಿಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಹಾಗೂ ಅವಭೃತೋತ್ಸವ ವೈದಿಕ ವಿಧಿವಿಧಾನಗಳೊಂದಿಗೆ ಜರುಗಿತು. ನಂತರ ಕುಮಾರಧಾರಾ ಪುಣ್ಯ ತೀರ್ಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಜಳಕ ನೆರವೇರಿತು. ಜಳಕದ ಬಳಿಕ ಕುಮಾರಧಾರಾ ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆ ಪೂಜೆ ನಡೆಯಿತು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆನೆ ಯಶಸ್ವಿಯು ಸ್ನಾನ ಮಾಡಿ ನೀರಾಟವಾಡಿತು. ಇನ್ನು ಡಿಸೆಂಬರ್ 2ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಂಡಿತು. ಅಂದು ರಾತ್ರಿ ದೇಗುಲದ ಹೊರಾಂಗಣದ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿತು. ಅಲ್ಲದೆ ಗೋಪುರ ನಡಾವಳಿ ನೆರವೇರಿತು.
ಇದನ್ನೂ ಓದಿ : ಕರ್ನಾಟಕದ ‘ರಾಜಭವನ’ ಇನ್ಮುಂದೆ ‘ಲೋಕಭವನ’.. ಹೆಸರು ಬದಲಾವಣೆಗೆ ಕಾರಣವೇನು?



















