ಪಣಜಿ : ಗೋವಾದಲ್ಲಿ ನಡೆದ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಅವರು ದೈವವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ (ಹೆಚ್‌ಜೆಎಸ್) ಸೋಮವಾರ ಪೊಲೀಸರಿಗೆ ದೂರು ನೀಡಿದೆ.
ಪಣಜಿಯಲ್ಲಿ ದಾಖಲಾದ ದೂರಿನ ಪ್ರಕಾರ, ರಣ್ವೀರ್ ಸಿಂಗ್ ಕನ್ನಡ ಸಿನಿಮಾ “ಕಾಂತಾರ: ಚಾಪ್ಟರ್ 1″ರಲ್ಲಿ ಚಿತ್ರಿಸಲಾದ ದೈವಿಕ ರೂಪವನ್ನು ವೇದಿಕೆಯ ಮೇಲೆ ಅನುಕರಿಸಿದ್ದಾರೆ. ಕೋಟಿ ತುಳು ಸಮುದಾಯದಿಂದ ಪೂಜಿಸಲ್ಪಡುವ ಚಾಮುಂಡಿ ದೈವವನ್ನು “ಸ್ತ್ರೀ ಪ್ರೇತ” ಎಂದು ಉಲ್ಲೇಖಿಸಿದ್ದಾರೆ ಎಂದು ಹೆಚ್‌ಜೆಎಸ್ ಆರೋಪಿಸಿದೆ.
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸುವಂತೆ ಕೋರಿ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳಾದ ಪ್ರಮೋದ್ ತುಯೇಕರ್ ಮತ್ತು ದಿಲೀಪ್ ಶೆಟ್ಯೆ ಅವರು ಪಣಜಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಹಿನ್ ಶೆಟ್ಯೆ ಅವರಿಗೆ ಮೆಮೊರೆಂಡಮ್ ಸಲ್ಲಿಸಿದರು.
“ಚಾಮುಂಡಿ ದೈವವನ್ನು ತುಳು ಸಮುದಾಯದ ಪವಿತ್ರ ಕುಟುಂಬ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ದೇವರನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸುವುದು ಅಥವಾ ವಿವರಿಸುವುದು ಅಗೌರವ ತೋರಿದಂತೆ. ಇಂತಹ ನಡೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಬಹುದು ಮತ್ತು ಶಾಂತಿ ಕದಡಬಹುದು” ಎಂದು ಹೆಚ್‌ಜೆಎಸ್ ದೂರಿದೆ.
ಸಮಗ್ರ ತನಿಖೆಯನ್ನು ಕೋರುವುದರ ಜೊತೆಗೆ, ಭವಿಷ್ಯದಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಯಾವುದೇ ಧಾರ್ಮಿಕ ದೈವ ಅಥವಾ ದೇವರನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸದಂತೆ ನಿಯಮಗಳನ್ನು ರೂಪಿಸುವಂತೆ ಐಎಫ್‌ಎಫ್‌ಐ ಸಂಘಟಕರಲ್ಲಿ ಹೆಚ್‌ಜೆಎಸ್ ಒತ್ತಾಯಿಸಿದೆ.
“ರಣ್ವೀರ್ ಸಿಂಗ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಮತ್ತು ಭವಿಷ್ಯದಲ್ಲಿ ಅಂತಹ ಹೇಳಿಕೆಗಳು ಅಥವಾ ಪ್ರದರ್ಶನಗಳನ್ನು ನೀಡುವುದಿಲ್ಲ ಎಂದು ಭರವಸೆ ನೀಡಬೇಕು” ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಇದರ ಜೊತೆಗೆ, ಬೆಂಬಲಿಗರು ಶಾಂತಿಯುತ ಮತ್ತು ಕಾನೂನುಬದ್ಧ ರೀತಿಯಲ್ಲಿ ತಮ್ಮ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದೆ.
ಇದರ ಬೆನ್ನಲ್ಲೇ ರಣ್ವೀರ್ ಸಿಂಗ್ ಸೋಷಿಯಲ್ ಮೀಡಿಯಾ ಮೂಲಕ ಕ್ಷಮೆಯಾಚಿಸಿದ್ದಾರೆ. ರಿಷಬ್ ಶೆಟ್ಟಿ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು ಎಂಬುದನ್ನು ಇಂದು ಸ್ಪಷ್ಟಪಡಿಸಿದ್ದಾರೆ.

ರಣ್ವೀರ್ ಸಿಂಗ್ ಇನ್ಸ್ಟಾಗ್ರಾಮ್ ಸ್ಟೋರಿ ಹೀಗಿದೆ | ”ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸುವುದು ಎಷ್ಟು ಸವಾಲಿನದ್ದು ಎಂಬುದು ನನಗೆ ತಿಳಿದಿದೆ. ಅವರ ನಟನೆಗೆ ನನ್ನ ಮೆಚ್ಚುಗೆ ಇದೆ. ನಮ್ಮ ದೇಶದ ಪ್ರತೀ ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಸದಾ ಗೌರವಿಸುತ್ತೇನೆ. ನಾನು ಯಾರದ್ದೇ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.”
ಇದನ್ನೂ ಓದಿ : ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ | ಮುಂಬೈನಲ್ಲಿ ತುರ್ತು ಭೂಸ್ಪರ್ಶ!



















