ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕೋರಿ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾವಲ್ಪಿಂಡಿಯಲ್ಲಿ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಗೊಳಿಸಲಾಗಿದೆ.
ರಾವಲ್ಪಿಂಡಿ ಜಿಲ್ಲಾಡಳಿತ ಹೊರಡಿಸಿರುವ ಆದೇಶದ ಪ್ರಕಾರ, ಡಿಸೆಂಬರ್ 1 ರಿಂದ ಡಿಸೆಂಬರ್ 3ರವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಳಗಿನ ಕಠಿಣ ನಿಯಮಗಳನ್ನು ವಿಧಿಸಲಾಗಿದೆ:
- ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ.
- ಯಾವುದೇ ರೀತಿಯ ಮೆರವಣಿಗೆ, ಧರಣಿ, ರ‍್ಯಾಲಿ ಅಥವಾ ಸಭೆಗಳನ್ನು ನಡೆಸುವಂತಿಲ್ಲ.
- ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಅಥವಾ ಹಿಂಸಾಚಾರಕ್ಕೆ ಬಳಸಬಹುದಾದ ಯಾವುದೇ ವಸ್ತುಗಳನ್ನು ಸಾಗಿಸುವಂತಿಲ್ಲ.
- ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ಮತ್ತು ಲೌಡ್‌ಸ್ಪೀಕರ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಗುಪ್ತಚರ ಇಲಾಖೆಯ ವರದಿಯ ಪ್ರಕಾರ, ಪ್ರತಿಭಟನಾಕಾರರು ಸೂಕ್ಷ್ಮ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
‘ತಂದೆ ಬದುಕಿದ್ದಾರಾ?’: ಇಮ್ರಾನ್ ಮಕ್ಕಳ ಆತಂಕ
ಆಗಸ್ಟ್ 2023 ರಿಂದ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಬಗ್ಗೆ ಕಳೆದ ಒಂದು ತಿಂಗಳಿನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ. ಅಲ್ಲದೇ, ಅವರನ್ನು ಜೈಲಿನಲ್ಲಿ ನೋಡಲು ಕೂಡ ಕಳೆದೊಂದು ತಿಂಗಳಿಂದ ನಿರ್ಬಂಧ ವಿಧಿಸಲಾಗಿದೆ. ಇಮ್ರಾನ್ ಖಾನ್ ಅವರ ಪುತ್ರ ಕಾಸಿಮ್ ಖಾನ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, “ನನ್ನ ತಂದೆ ಸುರಕ್ಷಿತವಾಗಿದ್ದಾರೆಯೇ, ಗಾಯಗೊಂಡಿದ್ದಾರೆಯೇ ಅಥವಾ ಬದುಕಿದ್ದಾರೆಯೇ ಎಂಬುದೇ ತಿಳಿಯುತ್ತಿಲ್ಲ. ಇದೊಂದು ರೀತಿಯ ಮಾನಸಿಕ ಹಿಂಸೆ,” ಎಂದು ಹೇಳಿದ್ದಾರೆ.
ನ್ಯಾಯಾಲಯದ ಆದೇಶವಿದ್ದರೂ ಜೈಲು ಅಧಿಕಾರಿಗಳು ಇಮ್ರಾನ್ ಖಾನ್ ಅವರ ಭೇಟಿಗೆ ಅವಕಾಶ ನೀಡುತ್ತಿಲ್ಲ. ಅಧಿಕಾರಿಗಳು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬ ಅನುಮಾನವಿದ್ದು, ತಂದೆಯ ಪ್ರಾಣಕ್ಕೆ ಅಪಾಯವಿದೆ ಎಂದು ಮಕ್ಕಳು ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಬದುಕಿದ್ದಾರೆ ಎಂಬುದಕ್ಕೆ ಸಾಕ್ಷ್ಯ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ರಾಮನಗರದಲ್ಲಿ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಅನುಮಾನಾಸ್ಪದ ಸಾವು | ಕೆರೆಯಲ್ಲಿ ಶವ ಪತ್ತೆ



















