ಪಣಜಿ : ಇತ್ತೀಚೆಗೆ ಗೋವಾದಲ್ಲಿ ಮುಕ್ತಾಯಗೊಂಡ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ, ಬಾಲಿವುಡ್ ನಟ ರಣವೀರ್ ಸಿಂಗ್ ಅವರು ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಅಣಕು ಮಾಡಿದ್ದಲ್ಲದೇ, ವೇದಿಕೆಯಲ್ಲೇ ದೈವದ ಆವಾಹನೆಯನ್ನು ಅನುಕರಿಸಿದ್ದಲ್ಲದೆ, ದೈವವನ್ನು ‘ಹೆಣ್ಣು ದೆವ್ವ’ (Female Ghost) ಎಂದು ಕರೆದಿದ್ದರು.
ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದೈವಾರಾಧನೆಯ ಸಂಪ್ರದಾಯವನ್ನು ಅವಮಾನಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ರಣವೀರ್ ವಿರುದ್ಧ ದೂರು ದಾಖಲಿಸಿದ್ದವು.
ರಣವೀರ್ ಸಿಂಗ್ ಕ್ಷಮಾಪಣೆ
ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಣವೀರ್ ಸಿಂಗ್ ಈಗ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಕ್ಷಮೆಯಾಚಿಸಿದ್ದಾರೆ. “ನನ್ನ ಉದ್ದೇಶ ರಿಷಬ್ ಶೆಟ್ಟಿಯವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದಾಗಿತ್ತು. ಒಬ್ಬ ನಟನಾಗಿ ಆ ದೃಶ್ಯವನ್ನು ಅಭಿನಯಿಸುವುದು ಎಷ್ಟು ಕಷ್ಟ ಎಂಬ ಅರಿವು ನನಗಿದೆ. ನಮ್ಮ ದೇಶದ ಎಲ್ಲಾ ಸಂಪ್ರದಾಯ, ಸಂಸ್ಕೃತಿ ಮತ್ತು ನಂಬಿಕೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ವರ್ತನೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಅವರು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಎಚ್ಚರಿಸಿದ್ದರು!
ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಅಣಕು ಪ್ರದರ್ಶನ ನೀಡುವ ಮುನ್ನವೇ, ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ರಿಷಬ್ ಶೆಟ್ಟಿ ಅವರು ಇದನ್ನು ಮಾಡದಂತೆ ಸನ್ನೆ ಮೂಲಕ ಎಚ್ಚರಿಸಿದ್ದರು ಎನ್ನಲಾಗಿದೆ. ಆದರೂ ರಣವೀರ್ ಅದನ್ನು ಕಡೆಗಣಿಸಿ ಮುಂದುವರೆಸಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿದ್ದು, ರಣವೀರ್ ವಿರುದ್ಧದ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿತ್ತು.

ರಣವೀರ್ ಸಿಂಗ್ ಹಾಗೂ ರಿಷಬ್ ಶೆಟ್ಟಿ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಈ ವೇಳೆ ರಣವೀರ್ ಸಿಂಗ್ ಅವರು ರಿಷಬ್ ನಟನೆಯ ಕಾಂತಾರ ಚಿತ್ರವನ್ನು ಹೊಗಳಿದರು. ‘ದೈವ’ ಎನ್ನುವ ಬದಲು ‘ದೆವ್ವ’ ಎಂದರು. ಇಷ್ಟೇ ಅಲ್ಲ, ರಿಷಬ್ ಅವರು ದೈವವನ್ನು ಅನುಕರಿಸಿದಂತೆ ತಾವೂ ಅನುಕರಿಸಲು ಹೋದರು. ಇದು ಹಾಸ್ಯಾಸ್ಪದ ಎನಿಸಿತು. ರಣವೀರ್ ಓರ್ವ ಜೋಕರ್ ರೀತಿ ಕಾಣಿಸಿದರು.
ಇದನ್ನೂ ಓದಿ : BBK 12 | ನಾಮೀನೇಷನ್ನೇ ಇರಲಿ, ಟಾಸ್ಕೇ ಬರಲಿ ಗಿಲ್ಲಿ ತಮಾಷೆ ಮಾತ್ರ ನಿಲ್ಲಲ್ಲ



















