ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದ ಗೆಲುವಿನ ಸಂಭ್ರಮದ ನಡುವೆಯೂ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಪಂದ್ಯದ ನಂತರ ಕೊಹ್ಲಿ ಅವರು ಗಂಭೀರ್ ಅವರನ್ನು ಕಡೆಗಣಿಸಿದರೇ ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಎದ್ದಿದೆ.
ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 17 ರನ್‌ಗಳ ರೋಚಕ ಜಯ ಸಾಧಿಸಿತು. ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುವಾಗ, ಅಲ್ಲಿಯೇ ಕುಳಿತಿದ್ದ ಕೋಚ್ ಗಂಭೀರ್ ಅವರನ್ನು ನೋಡದಂತೆ, ಹಸ್ತಲಾಘವವನ್ನೂ ನೀಡದೆ ನೇರವಾಗಿ ನಡೆದುಹೋದರು ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಇದು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹಗಳಿಗೆ ತುಪ್ಪ ಸುರಿಯಿತು.
ಮಾಧ್ಯಮಗಳ ವರದಿ ಏನು ಹೇಳುತ್ತದೆ?
‘ದೈನಿಕ್ ಭಾಸ್ಕರ್’ ವರದಿಯ ಪ್ರಕಾರ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೋಚ್ ಗಂಭೀರ್ ನಡುವೆ ಶೀತಲ ಸಮರ ನಡೆಯುತ್ತಿದೆ. ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ರೋಹಿತ್ ಮತ್ತು ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಒಗ್ಗೂಡಿದ್ದಾರೆ ಎನ್ನಲಾಗಿದೆ. ರಾಂಚಿಯಲ್ಲಿ ನಡೆದ ಅಭ್ಯಾಸದ ವೇಳೆಯೂ ಕೊಹ್ಲಿ ಮತ್ತು ಗಂಭೀರ್ ಪರಸ್ಪರ ಮಾತನಾಡಲಿಲ್ಲ ಎಂಬ ವರದಿಗಳು ಈ ಅನುಮಾನವನ್ನು ಹೆಚ್ಚಿಸಿವೆ.
ಅಸಲಿ ಸತ್ಯವೇನು?
ಆದರೆ, ಸೂಕ್ಷ್ಮವಾಗಿ ಗಮನಿಸಿದ ಅಭಿಮಾನಿಗಳು ವೈರಲ್ ವಿಡಿಯೋ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ಪಂದ್ಯದ ನಂತರ ಕೊಹ್ಲಿ ಅವರು ಗಂಭೀರ್ ಅವರಿಗೆ ಸೈಡ್ ಹಗ್ (Side-hug) ನೀಡಿ ಆತ್ಮೀಯವಾಗಿಯೇ ಮಾತನಾಡಿಸಿದ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಗಂಭೀರ್ ಅವರನ್ನು ಕೊಹ್ಲಿ ಕಡೆಗಣಿಸಿದ್ದಾರೆ ಎಂಬ ಸುದ್ದಿ ಕೇವಲ ಅರ್ಧ ಸತ್ಯ ಎಂಬುದು ಸ್ಪಷ್ಟವಾಗಿದೆ.
ವಿಶ್ವಕಪ್ ಮೇಲೆ ಕಣ್ಣು
ಪ್ರಸ್ತುತ 37ರ ಹರೆಯದ ಕೊಹ್ಲಿ ಮತ್ತು 38ರ ಹರೆಯದ ರೋಹಿತ್, 2027ರ ಏಕದಿನ ವಿಶ್ವಕಪ್ ಆಡುವ ಉತ್ಸಾಹದಲ್ಲಿದ್ದಾರೆ. ಆದರೆ ಗಂಭೀರ್ ನೇತೃತ್ವದ ಮ್ಯಾನೇಜ್‌ಮೆಂಟ್ ಈ ಬಗ್ಗೆ ಇನ್ನೂ ಖಚಿತ ಭರವಸೆ ನೀಡಿಲ್ಲ. ಏನೇ ಆಗಲಿ, ರಾಂಚಿ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಕೊಹ್ಲಿ ತಾವು ಇನ್ನೂ ಫಾರ್ಮ್ ಕಳೆದುಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ:‘ಆತನಿಗೇನು ಹುಚ್ಚು ಹಿಡಿದಿರಲಿಲ್ಲ’: ಕೊಹ್ಲಿ ನಿವೃತ್ತಿ ವಾಪಸ್ ಪಡೆಯುವ ಮಾತಿಗೆ ಅಶ್ವಿನ್ ಗರಂ!



















