ಶಬರಿಮಲೆ ಸ್ವಾಮಿ ಅಯ್ಯಪ್ಪನ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದು ಭಕ್ತರ ಮನ ಗೆದ್ದಿವೆ. ಈಗ ಕನ್ನಡದಲ್ಲಿ ‘ಮಣಿಕಂಠ’ ಎಂಬ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ ಮುಹೂರ್ತ ಮಾಡಲಾಗಿದೆ. ‘ಮಣಿಕಂಠ’ ಸಿನಿಮಾದ ಮಹೂರ್ತ ಸಮಾರಂಭಕ್ಕೆ ಕಾಶಿಯಿಂದ ನಾಗಸಾಧುಗಳು ಆಗಮಿಸಿದ್ದರು.
ನಾಗಸಾಧುಗಳ ಸಮ್ಮುಖದಲ್ಲಿ ‘ಮಣಿಕಂಠ’ ಸಿನಿಮಾಗೆ ಮುಹೂರ್ತ ಮಾಡಲಾಯಿತು. ‘ಅಶ್ವಿನಿ ಪ್ರೊಡಕ್ಷನ್ಸ್’ ಮೂಲಕ ಅಶ್ವಿನಿ ಸಂತೋಷ್ ಸಿಂಹ ಅವರು ಈ ಸಿನಿಮಾನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ, ಅವರೇ ಮುಖ್ಯ ಪಾತ್ರ ಕೂಡ ಮಾಡುತ್ತಿದ್ದಾರೆ. ಈವರೆಗೂ ಬೇರೆ ಸಿನಿಮಾಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡಿದ್ದ ಅವರು ಈಗ ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ.
ಸಂತೋಷ್ ಸಿಂಹ ಅವರೇ ಕಥೆ ಬರೆದು, ನಿರ್ದೇಶನ ಕೂಡ ಮಾಡಿದ್ದಾರೆ. ಅವರ ಇಬ್ಬರು ಮಕ್ಕಳು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಗುರು ಜೀವನ್ ಸಿಂಹ, ತನುಶ್ರೀ ಸಿಂಹ, ಬಿ.ಎಸ್. ಮಂಜುಳಾ, ಶರತ್ ಎಸ್.ಎಂ, ವೈಷ್ಣವಿ ಎಸ್.ಡಿ, ಮಮತಾ, ಶಿವಣ್ಣ ಮುಂತಾದ ಕಲಾವಿದರು ಕೂಡ ‘ಮಣಿಕಂಠ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮುಹೂರ್ತದ ಬಳಿಕ ಸಂತೋಷ್ ಸಿಂಹ ಅವರು ಈ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಪ್ರತಿಯೊಬ್ಬರ ಜೀವನದಲ್ಲಿ ಮಣಿಕಂಠ ಆವರಿಸಿಕೊಂಡಿದ್ದಾನೆ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. 25 ವರ್ಷ ದೊಡ್ಡಪಾದಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿಯ ದರ್ಶನ ಮಾಡಿದ್ದೇನೆ. ನನ್ನ ಬದುಕಲ್ಲಿ ನಡೆದ ಸತ್ಯ ಘಟನೆಗಳನ್ನು ಹಾಗೂ ಸ್ವಾಮಿಯ ಪವಾಡಗಳನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.
ಇದನ್ನೂ ಓದಿ : ಕುರ್ಚಿ ಕಿತ್ತಾಟದಲ್ಲಿ ಸಿದ್ದರಾಮಯ್ಯನವರೇ ಗೆಲ್ಲೋದು | ಮಹದೇವಪ್ಪ



















