ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯ ಸಾಧಿಸಿದ ನಂತರ, ನಾಯಕ ಕೆ.ಎಲ್. ರಾಹುಲ್ ಅವರು ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರಭಾವವನ್ನು ಬಣ್ಣಿಸಿದ್ದಾರೆ. ಈ ಇಬ್ಬರು ದಿಗ್ಗಜರು ಕ್ರೀಸ್‌ನಲ್ಲಿದ್ದರೆ ಎದುರಾಳಿ ಬೌಲರ್‌ಗಳು ಅಸಹಾಯಕರಂತೆ ಕಾಣುತ್ತಾರೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (135) ಮತ್ತು ರೋಹಿತ್ ಶರ್ಮಾ (57) ಅವರ ಆಕರ್ಷಕ ಆಟದಿಂದ ಭಾರತ 349 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಅಂತಿಮವಾಗಿ 17 ರನ್‌ಗಳ ಜಯ ಸಾಧಿಸಿದ ನಂತರ ಮಾತನಾಡಿದ ರಾಹುಲ್, “ರೋಹಿತ್ ಮತ್ತು ವಿರಾಟ್ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅವರು ಎದುರಾಳಿಗಳನ್ನು ತೀರಾ ಸಾಮಾನ್ಯರಂತೆ ಕಾಣುವಂತೆ ಮಾಡುತ್ತಾರೆ ಮತ್ತು ತಾವು ಏನೆಂಬುದನ್ನು ಜಗತ್ತಿಗೆ ಪದೇ ಪದೇ ಸಾಬೀತುಪಡಿಸುತ್ತಾರೆ. ದೀರ್ಘಕಾಲದ ನಂತರ ಡ್ರೆಸಿಂಗ್ ರೂಮ್‌ನಲ್ಲಿ ಅವರನ್ನು ನೋಡುವುದೇ ಒಂದು ಸಂಭ್ರಮದ ಸಂಗತಿ,” ಎಂದು ಹೇಳಿದ್ದಾರೆ.
ರೋಚಕ ಅಂತ್ಯ ಮತ್ತು ಒತ್ತಡ
ಪಂದ್ಯವು ಅಂತಿಮ ಹಂತದಲ್ಲಿ ರೋಚಕ ತಿರುವು ಪಡೆದಾಗ ಉಂಟಾದ ಒತ್ತಡದ ಬಗ್ಗೆಯೂ ರಾಹುಲ್ ಮಾತನಾಡಿದ್ದಾರೆ. “ಪಂದ್ಯದ ಕೊನೆಯ ಕ್ಷಣಗಳಲ್ಲಿ ಆತಂಕವಿರಲಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ (Butterflies in stomach). ನಾವು ಬಹಳ ದಿನಗಳ ನಂತರ ಏಕದಿನ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ನಿರೀಕ್ಷೆಗಳು ಹೆಚ್ಚಿದ್ದವು. ದಕ್ಷಿಣ ಆಫ್ರಿಕಾ ತಂಡವು ಕೊನೆಯವರೆಗೂ ಕಠಿಣ ಪೈಪೋಟಿ ನೀಡಿತು. ಆದರೆ ನಮ್ಮ ಬೌಲರ್‌ಗಳು ಯೋಜನೆಯಂತೆ ದಾಳಿ ನಡೆಸಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು,” ಎಂದು ಪಂದ್ಯದ ರೋಚಕತೆಯನ್ನು ವಿವರಿಸಿದರು.
ಆರನೇ ಕ್ರಮಾಂಕ ಮತ್ತು ಯುವ ಬೌಲರ್‌ಗಳಿಗೆ ಶ್ಲಾಘನೆ
ತಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, “ಕಳೆದ 2-3 ಸರಣಿಗಳಿಂದ ನನಗೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಜವಾಬ್ದಾರಿ ನೀಡಲಾಗಿದೆ. ತಂಡಕ್ಕಾಗಿ ಈ ಕೆಲಸ ಮಾಡುವುದು ನನಗೆ ಖುಷಿ ನೀಡಿದೆ ಮತ್ತು ಇದು ನನ್ನ ವೈಯಕ್ತಿಕ ಬೆಳವಣಿಗೆಗೂ ಸಹಕಾರಿಯಾಗಿದೆ,” ಎಂದರು.
ಇದೇ ವೇಳೆ ಯುವ ವೇಗಿ ಹರ್ಷಿತ್ ರಾಣಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಅವರ ಪ್ರದರ್ಶನವನ್ನು ನಾಯಕ ಕೊಂಡಾಡಿದರು. “ಹರ್ಷಿತ್ ರಾಣಾ ಅವರಿಗೆ ಉತ್ತಮ ಸಾಮರ್ಥ್ಯವಿದೆ ಎಂಬುದು ನಮಗೆ ತಿಳಿದಿತ್ತು. ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವುದು ಮುಖ್ಯ, ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕುಲದೀಪ್ ಯಾದವ್ ಕೂಡ ನಿರ್ಣಾಯಕ ಸಮಯದಲ್ಲಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು,” ಎಂದು ರಾಹುಲ್ ತಿಳಿಸಿದರು.
ಇದನ್ನೂ ಓದಿ: ಸಚಿನ್ ಅಥವಾ ಕೊಹ್ಲಿ? ಏಕದಿನ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಯಾರು ಎಂದು ಹೆಸರಿಸಿದ ಸುನಿಲ್ ಗವಾಸ್ಕರ್



















