ರಾಯಚೂರು : ಮಗನ ಮದುವೆ ದಿನವೇ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.
ಜಿಲ್ಲೆಯ ಸಿಂಧನೂರು ನಗರದ ವಾರ್ಡ್ 14ರ ನಿವಾಸಿ ಶರಣಯ್ಯ ಸ್ವಾಮಿ ಶಾಸ್ತ್ರಿಮಠ ಕಂದಗಲ್ (47) ಅವರು ಹೃದಯಘಾತದಿಂದ ಸಾವನ್ನಪ್ಪಿದವರು. ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಇವರಿಗೆ ರಕ್ತದೊತ್ತಡ (ಬಿಪಿ) ಕಡಿಮೆ ಆಗಿದೆ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮದುವೆ ನಡೆಯಬೇಕಿದ್ದ ಮನೆಯಲ್ಲಿ ಸದ್ಯ ಸೂತಕ ಛಾಯೆ ಆವರಿಸಿದೆ.
ಶರಣಯ್ಯ ಸ್ವಾಮಿ ಅವರು ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ, ಪರಿಚಯಸ್ಥರಿಗೆ ಖುದ್ದಾಗಿ ಹೋಗಿ ಮದುವೆಗೆ ಬರುವಂತೆ ಆಮಂತ್ರಣ ನೀಡಿದ್ದರು. ಶನಿವಾರ ವಿವಾಹಪೂರ್ವ ದೇವತಾ ಕಾರ್ಯವನ್ನು ಸಂಭ್ರಮದಿಂದ ನೆರವೇರಿಸಿ ನೆಂಟರು, ಅಕ್ಕಪಕ್ಕದ ಮನೆಯವರನ್ನು ಕರೆದು ಬಂದಿದ್ದರು. ದೇವತಾ ಕಾರ್ಯ ಮುಗಿಸಿಕೊಂಡು ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಗುರು-ಹಿರಿಯರು ನಿಶ್ಚಯಿಸಿದಂತೆ ಮದುವೆ ನಡೆಯಬೇಕಿತ್ತು.
ನೆಂಟರು, ಕುಟುಂಬಸ್ಥರು ಎಲ್ಲರೂ ಆಗಮಿಸಿದ್ದರು. ಆದರೆ ಮದುವೆಗೂ ಮುನ್ನವೇ ಮನೆಯ ಯಜಮಾನ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಮಾತನಾಡಿ, ಮದುವೆಗೆ ಆಹ್ವಾನಿಸಿದ ವ್ಯಕ್ತಿ ಇಂದು ಮೃತಪಟ್ಟಿರುವುದು ಸಂಬಂಧಿಕರಲ್ಲಿ ತೀವ್ರ ದುಃಖ ಉಂಟು ಮಾಡಿದೆ. ಮದುವೆಯನ್ನು ಮುಂದೂಡಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನೇ ಮರೆತಂತಿದೆ | ಹೆಚ್.ಡಿ ಕುಮಾರಸ್ವಾಮಿ



















