ಬೆಂಗಳೂರು : ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯಲ್ಲಿ ರೂಪಗೊಂಡ ದಿತ್ವಾ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಹವಾಮಾನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಚಳಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ವೇಳೆಯಲ್ಲೂ ತಣ್ಣನೆಯ ಗಾಳಿ ಮೈ ಕೊರೆಯುತ್ತಿದೆ. ರಾಜಧಾನಿಯ ತಾಪಮಾನ ಇನ್ನೂ 4 ಡಿಗ್ರಿ ಕುಸಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಎರಡು ದಿನಗಳಿಂದ ತಾಪಮಾನ ಹಠಾತ್ ಕುಸಿತಗೊಂಡಿದ್ದು, ಕನಿಷ್ಟ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಇಳಿಯುವ ಸಾಧ್ಯತೆ ಇದ್ದು, 12 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯಬಹುದೆಂದು ಇಲಾಖೆ ತಿಳಿಸಿದೆ.
ದಿತ್ವಾ ಚಂಡಮಾರುತ ತಮಿಳುನಾಡು ಹಾಗೂ ಆಂಧ್ರ ಕರಾವಳಿಗೆ ಅಪ್ಪಳಿಸಿರುವ ಪರಿಣಾಮ, ಕರ್ನಾಟಕದ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಕೆಂಗೇರಿ ಸೇರಿದಂತೆ ಬೆಂಗಳೂರಿನ ಹಲವೆಡೆ ಇಂದು ಬೆಳ್ಳಂಬೆಳಿಗ್ಗೆ ಮಳೆ ಸುರಿದಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು , ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಬೀದರ್, ಗದಗ, ಹಾವೇರಿ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರಿಯಲಿದೆ.
ಸಾರ್ವಜನಿರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಚಳಿಯಿಂದ ನಗರದಲ್ಲಿ ಮಂಜು ಕವಿದ ವಾತಾವರಣವಿದ್ದು, ಬೆಂಗಳೂರಿನ ವಾತಾವರಣ ನೋಡಿದರೆ ಮಿನಿ ಸ್ವಿಜರ್ಲ್ಯಾಂಡ್ನಂತೆ ಎನಿಸುತ್ತಿದೆ. ಮಾಲಿನ್ಯವೂ ಕಡಿಮೆ ಆಗಿರುವುದರಿಂದ ಒಂದು ವಾರದಿಂದ ಬೆಂಗಳೂರು ಹಳೆಯ ಬೆಂಗಳೂರು ರೀತಿಯಲ್ಲಿದೆ ಎಂದು ಕುಟುಂಬ ಸಮೇತ ವಾಕ್ಗೆ ಬಂದ ವಾಯು ವಿಹಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ಮೂರು ದಿನಗಳವರೆಗೆ ರಾಜ್ಯದ ಹವಾಮಾನ ಮಳೆ ಮತ್ತು ಚಳಿಯಿಂದ ಕೂಡಿರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.
ಇದನ್ನೂ ಓದಿ : ಅಮೆರಿಕದಲ್ಲಿ ಮತ್ತೆ ಶೂಟೌಟ್ | ನಾಲ್ವರು ಸಾವು..10 ಮಂದಿಗೆ ಗಾಯ



















