ಹೊಸೂರು/ಚೆನ್ನೈ: ಭಾರತದ ದ್ವಿಚಕ್ರ ವಾಹನ ದಿಗ್ಗಜ ಟಿವಿಎಸ್ ಮೋಟಾರ್ (TVS Motor) ಮತ್ತು ಜರ್ಮನಿಯ ಐಷಾರಾಮಿ ಬೈಕ್ ತಯಾರಕ ಬಿಎಂಡಬ್ಲ್ಯು ಮೋಟಾರಾಡ್ (BMW Motorrad) ನಡುವಿನ ಪಾಲುದಾರಿಕೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಮೈತ್ರಿಕೂಟದ ಅಡಿಯಲ್ಲಿ ಈಗಾಗಲೇ 2 ಲಕ್ಷ ಯುನಿಟ್‌ಗಳ ಉತ್ಪಾದನೆ ಪೂರ್ಣಗೊಂಡಿದ್ದು, ಇದೀಗ ಬಹುನಿರೀಕ್ಷಿತ ‘BMW F 450 GS’ ಬೈಕ್‌ನ ಉತ್ಪಾದನೆಯೂ ಆರಂಭಗೊಂಡಿದೆ.
ಹೊಸೂರಿನಲ್ಲಿರುವ ಟಿವಿಎಸ್ ಘಟಕದಲ್ಲಿ ಈ ಹೊಸ ಬೈಕ್ ತಯಾರಾಗುತ್ತಿದ್ದು, ಇದು ಟಿವಿಎಸ್ ಮತ್ತು ಬಿಎಂಡಬ್ಲ್ಯು ಪಾಲುದಾರಿಕೆಯ ಯಶಸ್ಸಿನ ಸಂಕೇತವಾಗಿದೆ ಎಂದು ಉಭಯ ಕಂಪನಿಗಳು ಬಣ್ಣಿಸಿವೆ.
ದಶಕದ ಗೆಳೆತನ, ಜಾಗತಿಕ ಯಶಸ್ಸು
2013ರಲ್ಲಿ ಆರಂಭವಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೈತ್ರಿ, ಕಳೆದ 10 ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಹಲವು ಪ್ರೀಮಿಯಂ ಬೈಕ್‌ಗಳನ್ನು ನೀಡಿದೆ. BMW G 310 R, G 310 GS ಮತ್ತು G 310 RR ಮಾದರಿಗಳು ಹೊಸೂರಿನ ಟಿವಿಎಸ್ ಘಟಕದಲ್ಲೇ ತಯಾರಾಗಿ ವಿಶ್ವದಾದ್ಯಂತ ರಫ್ತಾಗುತ್ತಿವೆ. ಯುರೋಪ್, ಅಮೆರಿಕ ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿ ಈ ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ.
BMW F 450 GS: ಹೊಸ ಅಧ್ಯಾಯ
ಇತ್ತೀಚೆಗೆ EICMA 2025 ಪ್ರದರ್ಶನದಲ್ಲಿ ಅನಾವರಣಗೊಂಡಿದ್ದ BMW F 450 GS, ಅಡ್ವೆಂಚರ್ ಬೈಕ್ ಪ್ರಿಯರ ಮನ ಗೆದ್ದಿತ್ತು. ಇದೀಗ ಇದರ ಉತ್ಪಾದನೆ ಅಧಿಕೃತವಾಗಿ ಭಾರತದಲ್ಲಿ ಆರಂಭವಾಗಿದೆ. ಇದು ಮಧ್ಯಮ ಶ್ರೇಣಿಯ (Mid-weight) ಅಡ್ವೆಂಚರ್ ಬೈಕ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಬಿಎಂಡಬ್ಲ್ಯು ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಮುಂದಿನ ಯೋಜನೆಗಳೇನು?
“ಎರಡು ಲಕ್ಷ ಯುನಿಟ್‌ಗಳ ಉತ್ಪಾದನೆಯ ಮೈಲಿಗಲ್ಲು ನಮ್ಮ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಗುಣಮಟ್ಟಕ್ಕೆ ಸಾಕ್ಷಿ. ಹೊಸ BMW F 450 GS ಬೈಕ್ ಟಿವಿಎಸ್‌ನ ಅತ್ಯಾಧುನಿಕ ಉತ್ಪಾದನಾ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಟಿವಿಎಸ್ ಮೋಟಾರ್ ಸಿಇಒ ಕೆ.ಎನ್. ರಾಧಾಕೃಷ್ಣನ್ ತಿಳಿಸಿದ್ದಾರೆ.
ಅಲ್ಲದೆ, ನಗರ ಸಂಚಾರಕ್ಕೆ ಬೇಕಾದ ಹೊಸ ಮೊಬಿಲಿಟಿ ಪರಿಹಾರಗಳು ಮತ್ತು ಮುಂದಿನ ತಲೆಮಾರಿನ ಪ್ರೀಮಿಯಂ ಬೈಕ್‌ಗಳ ಅಭಿವೃದ್ಧಿಗೆ ಉಭಯ ಕಂಪನಿಗಳು ಬಂಡವಾ ಹೂಡಿಕೆ ಮುಂದುವರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: SBI ಕಾರು ಸಾಲ ಹಗರಣ : ಬಿಎಂಡಬ್ಲ್ಯು, ಮರ್ಸಿಡಿಸ್, ಲ್ಯಾಂಡ್ ರೋವರ್ ಜಪ್ತಿ!



















