ಬೆಂಗಳೂರು: ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ, ನಾವಿಬ್ಬರು ಒಂದಾಗಿದ್ದೇವೆ, ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ಪಕ್ಷವನ್ನು ಇನ್ನಷ್ಟು ಶಕ್ತಿಶಾಲಿಗೊಳಿಸಿ 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಒಗ್ಗಟಿನ ಸಂದೇಶ ನೀಡಿದ್ದಾರೆ.

ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾನು ಮತ್ತು ಉಪ ಮುಖ್ಯಮಂತ್ರ ಡಿ.ಕೆ. ಶಿವಕುಮಾರ್ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದೇವೆ. ನಮಗೆ ಕರೆ ಮಾಡಿದ್ದ ಹೈಕಮಾಂಡ್ ನಾಯಕರು, ಗೊಂದಲ ತಿಳಿ ಮಾಡುವ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದರು. ಅದರಂತೆ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಸೂಚನೆಯಂತೆಯೇ ನಡೆದುಕೊಳ್ಳುತ್ತೇವೆ ಎಂದು ಈ ಹಿಂದೆಯೂ ಸ್ಪಷ್ಟಪಡಿಸಿದ್ದೆ. ಹೀಗಾಗಿ ನಮ್ಮ ನಡುವೆ ನಾಳೆಯಿಂದ ಯಾವುದೇ ಗೊಂದಲ ಇರಲ್ಲ. ಈಗಲೂ ಕೂಡ ಯಾವುದೇ ಗೊಂದಲ ಇಲ್ಲ. ಹಿಂದೆಯೂ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕರು ದೆಹಲಿಗೆ ಹೋಗಿದ್ದರ ಬಗ್ಗೆ ಮಾತನಾಡಿ, ಸಂಪುಟ ಪುನಾರಚನೆ ಮಾಡುತ್ತೇನೆ ಎಂದು ಹೇಳಿದ್ದೆ. ಹಾಗಾಗಿ ಕೆಲ ಶಾಸಕರು ಮಂತ್ರಿ ಮಾಡಿ ಎಂದು ದೆಹಲಿಗೆ ಹೋಗಿದ್ದರು. ನಾಯಕತ್ವದ ವಿರುದ್ಧವಾಗಿ ಶಾಸಕರು ದೆಹಲಿಗೆ ಹೋಗಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ..

ರಾಜ್ಯದ ಜನ ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ವಿಧಾನಸಭೆ ಅಧಿವೇಶನದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿದ್ದೇನೆ. ನಮ್ಮದು ಒಂದೇ ಗುಂಪು, ಹೈಕಮಾಂಡ್ ಗುಂಪು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ..
ಇದನ್ನೂ ಓದಿ: ಇದು ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ, ಬ್ರೇಕ್ ಮೀಟಿಂಗ್ | ಆರ್.ಆಶೋಕ್ ವ್ಯಂಗ್ಯ



















