ಬೆಂಗಳೂರು: ಅಕ್ರಮ ಸಂಬಂಧ ಹಿನ್ನಲೆ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಗಂಡನನ್ನು ಕೊಲೆ ಮಾಡಿ, ಪೆಟ್ರೋಲ್ ಸುರಿದು ಸುಟ್ಟಿರುವ ಘಟನೆ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.
ಯಾದಗಿರಿ ಮೂಲದ ಬಸವರಾಜು (28) ಕೊಲೆಯಾದ ದುರ್ದೈವಿ. ಶರಣಮ್ಮ(25), ವೀರಭದ್ರ (19) ಹಾಗೂ ಅನಿಲ್ ಬಂಧಿತ ಆರೋಪಿಗಳು. ನಾಲ್ಕು ವರ್ಷದ ಹಿಂದೆ ಶರಣಮ್ಮನನ್ನು ಮದುವೆಯಾಗಿದ್ದ ಬಸವರಾಜು, ತಿಗಳರಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ದಂಪತಿಗಳಿಬ್ಬರು ಆರೋಪಿ ವೀರಭದ್ರನ ತಂದೆ ಬಳಿ ಗಾರೆ ಕೆಲಸ ಮಾಡುತ್ತಿದ್ದರು. ವೀರಭದ್ರ ಕೆಲಸಗಾರರನ್ನು ಬಿಲ್ಡಿಂಗ್ ಬಳಿ ಬಿಡುವುದು, ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಶರಣಮ್ಮ ಹಾಗೂ ವೀರಭದ್ರ ನಡುವೆ ಸಂಬಂಧ ಬೆಳೆದಿದೆ. ಇದಕ್ಕೆ ಅಡ್ಡಿಯಾಗಿದ್ದ ಪತಿ ಬಸವರಾಜುವನ್ನು ಕೊಲೆ ಮಾಡಲು ಒಂದು ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದರು ಎನ್ನಲಾಗುತ್ತಿದೆ.
ಕಳೆದ ಶುಕ್ರವಾರ ಬಸವರಾಜು ಮನೆಯಲ್ಲಿ ಮಧ್ಯಪಾನ ಮಾಡಿ ಮಲಗಿದ್ದ. ಈ ವೇಳೆ ವೀರಭದ್ರನಿಗೆ ಕರೆ ಮಾಡಿ ಮನೆಗೆ ಕರೆಸಿದ್ದ ಶರಣಮ್ಮ. ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಮಾಡಲು ಯತ್ನಿಸಿದ್ದರು. ಸಾವನ್ನಪ್ಪದೇ ಇದ್ದಾಗ ನೇಣು ಹಾಕಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಶಿಫ್ಟ್ ಮಾಡಲು ಅನಿಲ್ ಎಂಬಾತನನ್ನು ಕರೆದುಕೊಂಡು ಬಂದಿದ್ದ ವೀರಭದ್ರ ಎಲ್ಲರೂ ಮಲಗಿದ ನಂತರ ತಡರಾತ್ರಿ12:30ಕ್ಕೆ ಮನೆಯಲ್ಲಿದ್ದ ಹಳೆ ಬಟ್ಟೆಗಳಲ್ಲಿ ಮೃತದೇಹ ಸುತ್ತಿ, ಚೀಲದಲ್ಲಿ ತುಂಬಿ ಒಂದು ಲೀಟರ್ ಪೆಟ್ರೋಲ್ ತೆಗೆದುಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿ ಸುಟ್ಟು ಹಾಕಿದ್ದಾರೆ.
ಮೂರು ದಿನಗಳ ನಂತರ ಮಹಿಳೆ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಬ್ಯಾಡರಹಳ್ಳಿ ಠಾಣೆಗೆ ಪತ್ನಿ ದೂರು ನೀಡಿದ್ದಳು. ಪೋಲಿಸರು ತನಿಖೆಗೆ ಇಳಿದಾಗ ಯಾವುದೇ ಸುಳಿವು ಸಿಗಲಿಲ್ಲ. ಸುಮಾರು ಮುನ್ನೂರು ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಕಾರಿನ ಓಡಾಟ ಸಿಕ್ಕಿದೆ. ಅದೇ ಆಧಾರದ ಮೇಲೆ ತನಿಖೆ ಮಾಡಿದಾಗ ಪತ್ನಿ ಹಾಗೂ ಪ್ರಿಯಕರನ ಕೈವಾಡ ಬೆಳಕಿಗೆ ಬಂದಿದೆ. ಸದ್ಯ ಮೂವರನ್ನು ಮಾದನಾಯಕನಹಳ್ಳಿ ಪೋಲಿಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಡಬ | ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಯತ್ನಿಸಿದ ಪತಿ ; ಚಿಕಿತ್ಸೆ ಫಲಕಾರಿಯಾಗದೇ ನಿಧನ



















