ನವದೆಹಲಿ : ಭಾರತದಲ್ಲಿ ಕರಾಳ ಅಧ್ಯಾಯ ಬರೆದ 26/11 2008ರ ಮುಂಬೈ ಭಯೋತ್ಪಾದಕ ದಾಳಿಗೆ 17 ವರ್ಷಗಳು ಕಳೆದಿದ್ದು, ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಿದೆ.
ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದ ಮೂಲಕ ಬಂದಿದ್ದ 10 ಮಂದಿ ಲಷ್ಕರ್-ಇ-ತೊಯ್ಬಾ ಉಗ್ರರು 2008ರ ನ.26ರಂದು ಮುಂಬೈನ ತಾಜ್ ಹೋಟೆಲ್, ಶಿವಾಜಿ ಟರ್ಮಿನಲ್ ಸೇರಿದಂತೆ 12 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಿದೇಶಿಗರೂ ಸೇರಿದಂತೆ 174 ಮಂದಿ ನಾಗರೀಕರು ಸಾವನ್ನಪ್ಪಿದ್ದರು.
ಈ ದಾಳಿಯಲ್ಲಿ ಮಡಿದವರು ಮತ್ತು ಪ್ರಾಣತ್ಯಾಗ ಮಾಡಿದವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಭಯೋತ್ಪಾದಕರ ವಿರುದ್ಧ ಹೋರಾಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಮ್ಮ ಎಕ್ಸ್ ಜಾಲತಾಣದಲ್ಲಿ ಈ ಕುರಿತು ಸ್ಮರಿಸಿಕೊಂಡಿರುವ ರಾಷ್ಟ್ರಪತಿ, “26/11 ಮುಂಬೈ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು, ನಮ್ಮ ದೇಶದ ಜನರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಸೈನಿಕರಿಗೆ ವಿನಮ್ರ ಗೌರವ ಸಲ್ಲಿಸುತ್ತೇನೆ. ದೇಶವು ಅವರ ಅತ್ಯುನ್ನತ ತ್ಯಾಗವನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ. ಎಲ್ಲ ರೀತಿಯ ಭಯೋತ್ಪಾದನೆ ಎದುರಿಸಲು ನಮ್ಮ ಬದ್ಧತೆ ಪುನರುಚ್ಚರಿಸೋಣ. ಬಲಿಷ್ಠ ಮತ್ತು ಹೆಚ್ಚು ಸಮೃದ್ಧ ಭಾರತವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಪ್ರಗತಿಯ ಹಾದಿಯಲ್ಲಿ ಒಟ್ಟಾಗಿ ಮುಂದುವರಿಯೋಣ” ಎಂದಿದ್ದಾರೆ.
ಅಂದು ಏನಾಗಿತ್ತು?
2008ರ ನವೆಂಬರ್ 26ರಂದು ಪಾಕಿಸ್ತಾನದ ಹತ್ತು ಭಯೋತ್ಪಾದಕರು ಮುಂಬೈನ ಹಲವಾರು ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ಇಟಿ)ನ ಸಶಸ್ತ್ರ ದಾಳಿಕೋರರು ಸಮುದ್ರದ ಮೂಲಕ ನಗರವನ್ನು ಪ್ರವೇಶಿಸಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಸಿಎಸ್ಟಿ ರೈಲ್ವೆ ನಿಲ್ದಾಣ ಮತ್ತು ನಾರಿಮನ್ ಹೌಸ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದ್ದರು.
ಇದನ್ನೂ ಓದಿ : ಪತಿ ಮನೆಯಲ್ಲಿ ಕಿರುಕುಳ | 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನಾಲೆಗೆ ಹಾರಿ ಆತ್ಮಹತ್ಯೆ



















