ಕೋಲಾರ: ಕೆರೆಯ ಮಧ್ಯೆ ತೆಪ್ಪದಲ್ಲಿ ಸಿಲುಕಿ ಪರದಾಡುತ್ತಿದ್ದ 3 ವರ್ಷದ ಮಗುವನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕು ಚುಂಚದೇನಹಳ್ಳಿ ಕೆರೆಯ ದಡದಲ್ಲಿ ಆಟವಾಡುತ್ತಿದ್ದ 3 ವರ್ಷದ ಅಮೂಲ್ಯ ತೆಪ್ಪದ ಮೂಲಕ ಕೆರೆಯ ಮಧ್ಯೆ ನೀರಿನಲ್ಲಿ ಸಿಲುಕಿದ್ದಳು. ಬೃಹತ್ ಕೆರೆಯ ಮಧ್ಯೆ ತೆಪ್ಪದಲ್ಲಿ ಸಿಲುಕಿದ್ದ ಮಗುವನ್ನು ರಕ್ಷಣೆ ಮಾಡುವುದು ಹರಸಾಹಸವೇ ಆಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಪೊಲೀಸರು ಈಜುಗಾರ ನಿಜಾಮುದ್ದೀನ್‌ನನ್ನು ಕರೆಸಿ ಮಗುವನ್ನು ರಕ್ಷಣೆ ಮಾಡಲು ಮುಂದಾದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಅಗ್ನಿ ಶಾಮಕದಳ ಸಿಬ್ಬಂದಿ ನಾಗಪ್ಪ ನಂದಿ 300 ಮೀ ಕೆರೆಯಲ್ಲಿ ಈಜುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ.
ಚಿತ್ರದುರ್ಗ ಮೂಲದ ರಂಗಸ್ವಾಮಿ ಹಾಗೂ ಅಂಜಲಿ ದಂಪತಿಯ 3 ವರ್ಷದ ಮಗು ಇದಾಗಿದ್ದು, ಕೆರೆಯಲ್ಲಿ ಮೀನು ಹಿಡಿಯಲು ಬಂದಿದ್ದ ವೇಳೆ ಕೆರೆಯ ದಡದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ತೆಪ್ಪದಲ್ಲಿ ಕೆರೆಯ ಮಧ್ಯ ಭಾಗಕ್ಕೆ ಹೋಗಿ ಸಿಲುಕಿತ್ತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಮಗುವಿನ ರಕ್ಷಣೆ ಮಾಡಲಾಗಿದೆ
ಪ್ರಾಣಾಪಾಯದಲ್ಲಿದ್ದ ಮಗುವನ್ನು ಕಾಪಾಡಿದ ಕೋಲಾರ ಗ್ರಾಮಾಂತರ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ನಾನು ಕೂಡ ದರ್ಶನ್ ಅಭಿಮಾನಿ’ | “ಡೆವಿಲ್” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಪ್ರತಾಪ್ ಸಿಂಹ



















