ದೋಹಾ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಭಾರತಕ್ಕೆ ಏಷ್ಯಾ ಕಪ್ ಟ್ರೋಫಿ ನೀಡಲು ನಿರಾಕರಿಸಿದ್ದ ಅವರು, ಇದೀಗ ತಮ್ಮ ತವರು ತಂಡ ಪಾಕಿಸ್ತಾನ ‘ಎ’ (Pakistan A) ಗೆದ್ದಾಗ ಖುದ್ದು ಟ್ರೋಫಿ ವಿತರಿಸಿ ಸಂಭ್ರಮಿಸಿದ್ದಾರೆ. ಭಾನುವಾರ ನಡೆದ ‘ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್’ ಫೈನಲ್‌ನಲ್ಲಿ ಪಾಕಿಸ್ತಾನ ‘ಎ’ ತಂಡವು ಬಾಂಗ್ಲಾದೇಶ ‘ಎ’ ವಿರುದ್ಧ ರೋಚಕ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿತು.
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಹಿರಿಯರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಆ ವೇಳೆ ಪಿಸಿಬಿ ಅಧ್ಯಕ್ಷರೂ ಆಗಿರುವ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ವೇದಿಕೆಯಲ್ಲಿ ಟ್ರೋಫಿ ನೀಡಲು ನಿರಾಕರಿಸಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಈಗ ಪಾಕಿಸ್ತಾನದ ಕಿರಿಯರ ತಂಡ ಗೆದ್ದಾಗ ಅವರೇ ಖುದ್ದು ಟ್ರೋಫಿ ಹಸ್ತಾಂತರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಸೂಪರ್ ಓವರ್‌ನಲ್ಲಿ ಪಾಕ್ ‘ಶಾಹೀನ್’ಗಳ ಜಯಭೇರಿ
ದೋಹಾದ ವೆಸ್ಟ್ ಎಂಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯ ರೋಚಕತೆಯ ಎಲ್ಲಾ ಮಜಲುಗಳನ್ನು ದಾಟಿತ್ತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 125 ರನ್ ಗಳಿಸಿತ್ತು. ಸಾಕ್ ಮಸೂದ್ (38) ಅವರ ಆಕ್ರಮಣಕಾರಿ ಆಟ ತಂಡಕ್ಕೆ ಆಸರೆಯಾಯಿತು. ಗುರಿ ಬೆನ್ನತ್ತಿದ ಬಾಂಗ್ಲಾದೇಶ ಕೂಡ ಅಷ್ಟೇ ರನ್ ಗಳಿಸಿದ್ದರಿಂದ ಪಂದ್ಯ ‘ಟೈ’ ಆಯಿತು. ಅಂತಿಮ ಓವರ್‌ನಲ್ಲಿ ಅಹ್ಮದ್ ದನಿಯಾಲ್ ಅದ್ಭುತ ಬೌಲಿಂಗ್ ಮಾಡಿ ಪಂದ್ಯವನ್ನು ‘ಸೂಪರ್ ಓವರ್’ಗೆ ತಂದು ನಿಲ್ಲಿಸಿದರು.
ಮೂರನೇ ಬಾರಿಗೆ ಚಾಂಪಿಯನ್
ಸೂಪರ್ ಓವರ್‌ನಲ್ಲಿ ಬಾಂಗ್ಲಾದೇಶ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಪಾಕಿಸ್ತಾನ, ‘ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್’ ಇತಿಹಾಸದಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಇರ್ಫಾನ್ ಖಾನ್ ನಿಯಾಜಿ ನೇತೃತ್ವದ ಪಾಕ್ ಪಡೆ, ಚೊಚ್ಚಲ ಪ್ರಶಸ್ತಿ ಕನಸು ಕಾಣುತ್ತಿದ್ದ ಬಾಂಗ್ಲಾದೇಶಕ್ಕೆ ನಿರಾಸೆ ಮೂಡಿಸಿತು.
ವೇದಿಕೆಯಲ್ಲಿ ನಖ್ವಿ ಸಂಭ್ರಮ
ಪಂದ್ಯದಿಯುದ್ದಕ್ಕೂ ಮೈದಾನದಲ್ಲೇ ಇದ್ದ ಮೊಹ್ಸಿನ್ ನಖ್ವಿ, ಪಾಕಿಸ್ತಾನ ಗೆಲ್ಲುತ್ತಿದ್ದಂತೆಯೇ ಸಂಭ್ರಮಿಸಿದರು. ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ಪಾಕಿಸ್ತಾನ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಿದರು. ಭಾರತಕ್ಕೆ ಟ್ರೋಫಿ ನೀಡುವಾಗ ಅಂತರ ಕಾಯ್ದುಕೊಂಡಿದ್ದ ನಖ್ವಿ, ಪಾಕಿಸ್ತಾನದ ವಿಷಯದಲ್ಲಿ ತೋರಿದ ಈ ತಾರತಮ್ಯ ನೀತಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತ ವನಿತೆಯರಿಗೆ ಪ್ರಧಾನಿ ಮೋದಿ ಶ್ಲಾಘನೆ



















