ಬಾಗಲಕೋಟೆ: ‘ಕೈ’ ನಾಯಕರ ನಡುವೆ ಅಧಿಕಾರ ಹಂಚಿಕೆಯ ಗುದ್ದಾಟ ಜೋರಾಗಿರುವ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ದೇವಾಲಯಗಳಲ್ಲಿ ವಿಶೇಷ ಪಾರ್ಥನೆ, ಪೂಜೆ, ಹರಕೆಗಳನ್ನು ಮಾಡಲು ಆರಂಭಿಸಿದ್ದಾರೆ.
ಡಿಕೆಶಿ ಸಿಎಂ ಆಗಲೆಂದು ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು, ಜಮಖಂಡಿ ತಾಲೂಕಿನ ಕಲ್ಲೋಳ್ಳಿದ ಶ್ರೀ ಲಕ್ಷ್ಮಿ ವೆಂಕಟರಮಣ ದೇವರಿಗೆ ಹರಕೆ ಹೊತ್ತು, ವಿಶೇಷ ಪೂಜೆ ಮಾಡಿಸಿ, ಈಡುಗಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುಮಾರ್ ದಾನಕ್ಕನವರ್ ಅವರ ನೇತೃತ್ವದಲ್ಲಿ ಈ ಪೂಜೆ ನಡೆದಿದ್ದು, ದೇವಾಲಯದಲ್ಲಿ ಡಿಕೆಶಿ ಅವರ ಫೋಟೋ ಇಟ್ಟು ಅಭಿಷೇಕ ಮಾಡುವ ಮೂಲಕ ಡಿಕೆಶಿ ಸಿಎಂ ಆಗಲಿ ಎಂಬ ಸಂಕಲ್ಪ ವ್ಯಕ್ತಪಡಿಸಿದ ಕಾರ್ಯಕರ್ತರು, ದೇವಸ್ಥಾನದ ಮುಂಭಾಗದಲ್ಲಿ 1001 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಸಿದ್ದಾರೆ.
ಪಕ್ಷದ ಆಪ್ತ ಶಾಸಕರು, ಸಚಿವರಿಂದ ಲಾಬಿ ಸಾಗುತ್ತಿರುವ ನಡುವೆಯೇ ಈಗ ಕಾರ್ಯಕರ್ತರೇ ಅಖಾಡಕ್ಕೆ ಇಳಿದಿರುವುದು ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಜಿ-20 ಶೃಂಗಾಸಭೆ | ಜಾಗತಿಕ ಅಭಿವೃದ್ಧಿಗಾಗಿ ಮೋದಿಯ ʼಪಂಚ ಸೂತ್ರʼ



















