ದಕ್ಷಿಣ ಆಫ್ರಿಕಾದಲ್ಲಿ ನಡೆದ ಜಿ20 ಶೃಂಗಾಸಭೆಯಲ್ಲಿ ವಿಶ್ವದ ನಾನಾ ದೇಶದ ಗಣ್ಯರು ಭಾಗಿಯಾಗಿದ್ದರು. ಅಂತೆಯೇ ಭಾರತವನ್ನ ಪ್ರತಿನಿಧಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಜಾಗತಿಕ ಅಭಿವೃದ್ಧಿಗಾಗಿ 5 ಸೂತ್ರಗಳನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ.
ಜಗತ್ತಿನ ರಾಜಕೀಯ–ಆರ್ಥಿಕ ವೇದಿಕೆಗಳು ದೊಡ್ಡ ಬದಲಾವಣೆಯ ಅಂಚಿನಲ್ಲಿರುವ ಸಮಯದಲ್ಲಿ.. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅಭಿವೃದ್ಧಿಗೆ 5 ಮಹತ್ವದ ಆರಂಭಿಕ ಹೆಜ್ಜೆಗಳನ್ನ ಪ್ರಸ್ತಾಪಿಸಿದರು.. ವಿಶ್ವ ಎದುರಿಸುತ್ತಿರುವ ಮೂರು ದೊಡ್ಡ ಬಿಕ್ಕಟ್ಟುಗಳಾದ ಆರ್ಥಿಕ ಅಸ್ಥಿರತೆ, ಹವಾಮಾನ ಸಂಕಟ, ತಂತ್ರಜ್ಞಾನ ಅಸಮಾನತೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿದೆ. ಈ ಐದು ಸೂತ್ರಗಳು ಈಗ ಜಾಗತಿಕ ಚರ್ಚೆಗೆ ಕಾರಣವಾಗಿದೆ.
ಮೋದಿ ನೀಡಿದ ಮೊದಲ ಸೂತ್ರ : ಸಾಂಪ್ರದಾಯಿಕ ಜ್ಞಾನ ಭಂಡಾರ ಸ್ಥಾಪನೆ
ಪ್ರಧಾನಿ ಮೋದಿಯವರು ಮೊದಲನೆಯದಾಗಿ ಸಾಂಪ್ರದಾಯಿಕ ಜ್ಞಾನ ಭಂಡಾರವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನ ಮಂಡಿಸಿದರು.. ಇದು ಸುಸ್ಥಿರ ಜೀವನಶೈಲಿಯ ಕಾಲ ಹಾಗೂ ಪರೀಕ್ಷಿತ ಮಾದರಿಗಳನ್ನ ದಾಖಲಿಸುತ್ತದೆ. ಈ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಈ ಸೂತ್ರದ ಉದ್ದೇಶ. “ಈ ನಿಟ್ಟಿನಲ್ಲಿ ಭಾರತಕ್ಕೆ ಶ್ರೀಮಂತ ಇತಿಹಾಸವಿದೆ. ಇದು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ಸಾಮೂಹಿಕ ಜ್ಞಾನವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ,” ಎಂದು ಪ್ರಧಾನಿ ಶೃಂಗಸಭೆಯಲ್ಲಿ ಹೇಳಿದರು.
ಮೋದಿ ನೀಡಿದ 2ನೇ ಸೂತ್ರ : ಆಫ್ರಿಕಾ ಕೌಶಲ್ಯ ವೃದ್ಧಿ
ಎರಡನೆಯದಾಗಿ, ಆಫ್ರಿಕಾ ಕೌಶಲ್ಯ ವೃದ್ಧಿ ಉಪಕ್ರಮವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಆಫ್ರಿಕಾದ ಅಭಿವೃದ್ಧಿ ಜಾಗತಿಕ ಪ್ರಗತಿಗೆ ಅತ್ಯಗತ್ಯ.. ಭಾರತ ಯಾವಾಗಲೂ ಆಫ್ರಿಕಾ ಖಂಡದೊಂದಿಗೆ ನಿಲ್ಲುತ್ತದೆ. ಈ ಉಪಕ್ರಮವು ‘ತರಬೇತುದಾರರಿಗೆ ತರಬೇತಿ’ ಮಾದರಿಯನ್ನಅನುಸರಿಸುತ್ತದೆ. ಇದರ ಗುರಿ ಮುಂದಿನ ದಶಕದಲ್ಲಿ ಆಫ್ರಿಕಾದಲ್ಲಿ ಒಂದು ಮಿಲಿಯನ್ ತರಬೇತುದಾರರನ್ನು ಸೃಷ್ಟಿಸುವುದು ಮತ್ತು ಸ್ಥಳೀಯ ಸಾಮರ್ಥ್ಯವನ್ನ ನಿರ್ಮಿಸುವುದಾಗಿದೆ. ಇದು ಆಫ್ರಿಕಾದ ದೀರ್ಘಕಾಲೀನ ಅಭಿವೃದ್ಧಿಯನ್ನ ಬಲಪಡಿಸುತ್ತದೆ ಎಂದು ತಿಳಿಸಿದರು.
3ನೇ ಸೂತ್ರ : ಆರೋಗ್ಯ ಪ್ರತಿಕ್ರಿಯೆ ತಂಡ ಸ್ಥಾಪನೆ
ಮೂರನೆಯದಾಗಿ, ಜಿ20 ಜಾಗತಿಕ ಆರೋಗ್ಯ ಪ್ರತಿಕ್ರಿಯೆ ತಂಡವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು. “ಆರೋಗ್ಯ ತುರ್ತು ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳ ಎದುರಿಸುವಾಗ ನಾವು ಒಟ್ಟಾಗಿ ನಿಲ್ಲಬೇಕು ಆಗ ಪ್ರತಿಯೊಂದು ದೇಶವು ಬಲಶಾಲಿಗಳಾಗುತ್ತವೆ. ಜಾಗತಿಕ ಆರೋಗ್ಯ ಬಿಕ್ಕಟ್ಟು ಅಥವಾ ನೈಸರ್ಗಿಕ ವಿಕೋಪ ಸಂಭವಿಸಿದಾಗ ತ್ವರಿತವಾಗಿ ನಿಯೋಜನೆಗೆ ಸಿದ್ಧರಾಗಿರುವ ಸಹ-ಜಿ20 ರಾಷ್ಟ್ರಗಳ ತರಬೇತಿ ಪಡೆದ ವೈದ್ಯಕೀಯ ತಜ್ಞರ ತಂಡಗಳನ್ನು ರಚಿಸಲು ನಮ್ಮ ಪ್ರಯತ್ನ ಇರಬೇಕು,”ಎಂದರು
4ನೇ ಸೂತ್ರ : ಮಾದಕ ದ್ರವ್ಯ ಕಳ್ಳಸಾಗಣೆ & ಅಪಾಯಕಾರಿ ಪದಾರ್ಥಗಳ ಹರಡುವಿಕೆ ತಡೆ
ನಾಲ್ಕನೆಯದಾಗಿ, ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಫೆಂಟಾನಿಲ್ ನಂತಹ ಅಪಾಯಕಾರಿ ಪದಾರ್ಥಗಳ ಹರಡುವಿಕೆಯನ್ನ ತಡೆಯುವ ಸವಾಲುಗಳ ತಡೆಯನ್ನು ಪ್ರಸ್ತಾಪಿಸಲಾಯಿತು. ಈ ಉಪಕ್ರಮದ ಅಡಿಯಲ್ಲಿ, ನಾವು ಹಣಕಾಸು, ಆಡಳಿತ ಮತ್ತು ಭದ್ರತೆಗೆ ಸಂಬಂಧಿಸಿದ ವಿವಿಧ ಸಾಧನಗಳನ್ನು ಒಟ್ಟುಗೂಡಿಸಬಹುದು. ಆಗ ಮಾತ್ರ ಮಾದಕ ದ್ರವ್ಯ-ಭಯೋತ್ಪಾದನೆ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು,” ಎಂದು ಪ್ರಧಾನಿ ಮೋದಿ ಹೇಳಿದರು.
5ನೇ ಸೂತ್ರ : ನಿರ್ಣಾಯಕ ಖನಿಜಗಳ ಚೌಕಟ್ಟಿನ ಮೇಲೆ ಒತ್ತು
5ನೇದಾಗಿ, ಸುಸ್ಥಿರ ಅಭಿವೃದ್ಧಿ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ಖನಿಜಗಳನ್ನು ವೇಗವರ್ಧಕವಾಗಿ ಬಳಸುವ ಉದ್ದೇಶದಿಂದ ಜಿ-20 ನಿರ್ಣಾಯಕ ಖನಿಜಗಳ ಚೌಕಟ್ಟನ್ನು ರಚಿಸುವತ್ತ ಒತ್ತು ನೀಡಿದರು. ವಿಶ್ವ ಆರ್ಥಿಕತೆಯು ಸುಸ್ಥಿರ ಪರಿವರ್ತನೆಗಳು, ತ್ವರಿತ ಡಿಜಿಟಲೀಕರಣ ಮತ್ತು ಕೈಗಾರಿಕಾ ನಾವೀನ್ಯತೆಗಳು ಸೇರಿದಂತೆ ಗಮನಾರ್ಹ ಬದಲಾವಣೆ ಈ ಸೂತ್ರದಲ್ಲಿ ಆಗುತ್ತದೆ ಎಂದು ಮೋದಿ ತಿಳಿಸಿದರು.
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ G-20 ಶೃಂಗಸಭೆಯಲ್ಲಿ ಅಮೆರಿಕದ ಯಾವುದೇ ಅಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು. ಆಫ್ರಿಕಾನರ್‌ಗಳ ಹತ್ಯೆ ಮತ್ತು ಭೂಮಿ ವಶಪಡಿಸಿಕೊಳ್ಳುವಂತಹ ವಿಚಾರವಾಗಿ ಮಾನವ ಹಕ್ಕುಗಳ ಉಲ್ಲಂಘನೆಗಳು ನಿಲ್ಲೋವರೆಗೆ ಅಮೆರಿಕದ ಈ ನಿರ್ಧಾರ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದರು. ಆದ್ರೆ, ದಕ್ಷಿಣ ಆಫ್ರಿಕಾ ಸರ್ಕಾರವು ಟ್ರಂಪ್ ನ ಈ ಎಲ್ಲ ಆರೋಪಗಳನ್ನು ತೀವ್ರವಾಗಿ ತಳ್ಳಿಹಾಕಿದೆ.
ಜಗತ್ತನ್ನು ವಿಭಜನೆಗಿಂತ ಏಕತೆಯತ್ತ, ಬಿಕ್ಕಟ್ಟಿಗಿಂತ ಬೆಳವಣಿಗೆಯತ್ತ ಕರೆದೊಯ್ಯುವ ಐದು ಮೋದಿಯ ಸೂತ್ರಗಳು ಈಗಿನ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಬಹುಮುಖ್ಯ. G-20 ಶೃಂಗಸಭೆ ಮೂಲಕ ಭಾರತ ಜಗತ್ತಿಗೆ ಹೊಸ ಮಾರ್ಗದರ್ಶನ ನೀಡಿದೆ ಎಂಬುದು ಸ್ಪಷ್ಟ.ಇದೀಗ ಮೋದಿಯ ಈ ಪಂಚ ಸೂತ್ರಗಳ ಪ್ರಸ್ತಾವನೆಯಿಂದ ಎಲ್ಲಾ ರಾಷ್ಟ್ರಗಳು ಭಾರತದತ್ತ ಗಮನಸೆಳೆದಿದೆ.. ಮುಂದಿನ ವರ್ಷಗಳಲ್ಲಿ ಈ ಸೂತ್ರಗಳು ಜಾಗತಿಕ ನೀತಿಯನ್ನು ಹೇಗೆ ಬದಲಿಸುತ್ತವೆ ಎಂಬುದು ನೋಡಬೇಕಾಗಿದೆ..
ಇದನ್ನೂ ಓದಿ : ಭಾರತಕ್ಕೆ ಕಾಲಿಟ್ಟ ಬಹುನಿರೀಕ್ಷಿತ ‘ರಾಯಲ್ ಎನ್‌ಫೀಲ್ಡ್ ಬುಲೆಟ್ 650’



















