ಬೆಂಗಳೂರು: ದೇಶದ ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ. ಕೇಂದ್ರ ಸರ್ಕಾರವು 29 ಕೇಂದ್ರೀಯ ಕಾರ್ಮಿಕ ಕಾನೂನು ನಿಯಮಗಳನ್ನು ರದ್ದುಗೊಳಿಸಿ, 4 ಹೊಸ ಸಂಹಿತೆಗಳನ್ನು (New Labour Codes) ಜಾರಿಗೆ ತಂದಿದೆ. ಇದರಿಂದಾಗಿ ಕಾರ್ಮಿಕರಿಗೆ ಹಲವು ಸೌಲಭ್ಯಗಳು ದೊರೆಯಲಿವೆ. ಅದರಲ್ಲೂ, ನಿಗದಿತ ಅವಧಿಗೆ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ನೌಕರರಿಗೆ ಗ್ರ್ಯಾಚುಟಿ ನೀಡುವ ಅವಧಿಯನ್ನು (Gratuity Eligibility Period) ಇಳಿಸಿರುವುದು ಮಹತ್ವದ ಸುಧಾರಣೆ ಎನಿಸಿದೆ.
ಹೌದು, ಕೇಂದ್ರ ಸರ್ಕಾರವು ಸೀಮಿತ ಅವಧಿಗೆ ಮಾತ್ರ ನೇಮಕಗೊಂಡ ನೌಕರರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೊಸ ನಿಯಮ ಜಾರಿಗೆ ತಂದಿದೆ. ಇದಕ್ಕೂ ಮೊದಲು ಒಂದೇ ಸಂಸ್ಥೆಯಲ್ಲಿ ಸತತವಾಗಿ 5 ವರ್ಷ ಕೆಲಸ ಮಾಡಿದವರಿಗೆ ಮಾತ್ರ ಗ್ರಾಚ್ಯುಟಿ ಸೌಲಭ್ಯವನ್ನು ನೀಡಲಾಗುತ್ತಿತ್ತು. ಆದರೆ, ಹೊಸ ಸಂಹಿತೆಗಳ ಪ್ರಕಾರ ನೌಕರರು ಒಂದು ವರ್ಷ ಕೆಲಸ ಮಾಡಿದರೂ, ಅವರಿಗೆ ಗ್ರಾಚ್ಯುಟಿ ಸೌಲಭ್ಯವನ್ನು ನೀಡಬೇಕು ಎಂದು ಆದೇಶಿಸಲಾಗಿದೆ.
ಈ ಹಿಂದಿನ ಕಾನೂನಿನಲ್ಲಿ ಕಾಯಂ ನೌಕರರು ಮಾತ್ರ ಐದು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ ಗ್ರಾಚ್ಯುಟಿ ಪಡೆಯಬೇಕಿತ್ತು. ಹೊಸ ನಿಯಮಗಳ ಪ್ರಕಾರ, ಒಂದು ಸಂಸ್ಥೆಯಲ್ಲಿ ಒಂದು ವರ್ಷ ಪೂರೈಸಿದ ನಿಗದಿತ ಅವಧಿಯ ನೌಕರರು ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ. ಎಂದು ತಿಳಿಸಲಾಗಿದೆ.
ಹೊಸ ಸಂಹಿತೆಗಳಿಂದಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು, ವಲಸೆ ಕಾರ್ಮಿಕರು, ಗಿಗ್ ಕಾರ್ಮಿಕರು ಸೇರಿ ಹಲವು ರೀತಿಯ ನೌಕರರಿಗೆ ಅನುಕೂಲವಾಗಲಿದೆ. ಕಾರ್ಮಿಕರು, ಅಸಂಘಟಿತ ವಲಯದ ನೌಕರರಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ನೂತನ ಸಂಹಿತೆಗಳ ಅನ್ವಯ ಹಲವು ನಿಯಮಗಳನ್ನು ರೂಪಿಸಲಾಗಿದೆ.
ಇದನ್ನೂ ಓದಿ: ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ 16 ಹುದ್ದೆಗಳ ನೇಮಕ : ಫ್ರೆಶರ್ ಗಳಿಗೆ ಗುಡ್ ನ್ಯೂಸ್



















