ಇಂಫಾಲ್: ಗಲಭೆಪೀಡಿತ ಮಣಿಪುರಕ್ಕೆ 3 ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ಸಮಾಜದ ಅಸ್ತಿತ್ವದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದಾರೆ. “ಹಿಂದೂಗಳು ಇಲ್ಲದಿದ್ದರೆ ಈ ಜಗತ್ತು ಉಳಿಯುವುದಿಲ್ಲ,” ಎಂದು ಅವರು ಪ್ರತಿಪಾದಿಸಿದ್ದಾರೆ. ಹಿಂದೂ ಸಮಾಜವನ್ನು ‘ವಿಶ್ವದ ಪಾಲಕ’ ಎಂದು ಬಣ್ಣಿಸಿದ ಅವರು, ಭಾರತೀಯ ನಾಗರಿಕತೆಯು ಗ್ರೀಸ್, ಈಜಿಪ್ಟ್ ಮತ್ತು ರೋಮ್‌ನಂತಹ ಸಾಮ್ರಾಜ್ಯಗಳನ್ನೂ ಮೀರಿಸಿ ಇಂದಿಗೂ ಉಳಿದುಕೊಂಡಿದೆ ಎಂದು ಹೇಳಿದ್ದಾರೆ.
“ಹಿಂದೂ ಸಮಾಜ ಅಮರ”
ಭಾಗವತ್ ಅವರ ಪ್ರಕಾರ, ವಿಶ್ವದ ಇತರೆಲ್ಲಾ ನಾಗರಿಕತೆಗಳು (ಯುನನ್, ಮಿಸ್ರ್, ರೋಮ್) ಕಾಲಘಟ್ಟದಲ್ಲಿ ನಾಶವಾಗಿವೆ. ಆದರೆ ಭಾರತೀಯ ನಾಗರಿಕತೆ ಮಾತ್ರ ಇಂದಿಗೂ ಉಳಿದುಕೊಂಡಿದೆ. “ನಮ್ಮ ನಾಗರಿಕತೆಯಲ್ಲಿ ಏನೋ ಒಂದು ವಿಶೇಷತೆಯಿದೆ, ಅದಕ್ಕಾಗಿಯೇ ನಾವು ಇನ್ನೂ ಇಲ್ಲಿದ್ದೇವೆ,” ಎಂದು ಅವರು ಅಭಿಪ್ರಾಯಪಟ್ಟರು. ಹಿಂದೂ ಸಮುದಾಯವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಒಂದು ಬಲವಾದ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಆರ್ಥಿಕ ಸ್ವಾವಲಂಬನೆಗೆ ಒತ್ತು
ದೇಶದ ಬಲವರ್ಧನೆಗೆ ಆರ್ಥಿಕ ಸ್ವಾವಲಂಬನೆ ಅತ್ಯಗತ್ಯ ಎಂದು ಭಾಗವತ್ ಪ್ರತಿಪಾದಿಸಿದರು. “ದೇಶ ಕಟ್ಟಲು ಶಕ್ತಿ ಬೇಕು, ಶಕ್ತಿ ಎಂದರೆ ಆರ್ಥಿಕ ಸಾಮರ್ಥ್ಯ. ನಮ್ಮ ಆರ್ಥಿಕತೆ ಸಂಪೂರ್ಣವಾಗಿ ಸ್ವಾವಲಂಬಿಯಾಗಿರಬೇಕು, ನಾವು ಯಾರ ಮೇಲೂ ಅವಲಂಬಿತರಾಗಬಾರದು,” ಎಂದು ಅವರು ಹೇಳಿದರು. ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಆಮದುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿರುವ ಸಂದರ್ಭದಲ್ಲಿ, ಭಾಗವತ್ ಅವರ ಈ ‘ಸ್ವದೇಶಿ’ ಪ್ರತಿಪಾದನೆ ಮಹತ್ವ ಪಡೆದುಕೊಂಡಿದೆ.
ಮಣಿಪುರ ಶಾಂತಿ ಮತ್ತು ಅಭಿವೃದ್ಧಿ
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಇದು ಅವರ ಮೊದಲ ಭೇಟಿಯಾಗಿದ್ದು, “ಸರ್ಕಾರಕ್ಕೆ ಗೊತ್ತಿದೆಯೋ ಇಲ್ಲವೋ, ನಮಗೆ ಮಣಿಪುರದ ಬಗ್ಗೆ ಕಾಳಜಿಯಿದೆ. ಸಂಘವು ಮಣಿಪುರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿದೆ,” ಎಂದು ಅವರು ಭರವಸೆ ನೀಡಿದರು. ಮಣಿಪುರದಲ್ಲಿ ಶಾಂತಿ ನೆಲೆಸಲು ಸಮಯ ಬೇಕಾಗಬಹುದು, ಆದರೆ ಸಮಾಜ ಒಗ್ಗೂಡಿ ನಿಂತರೆ ಅದು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಭಾರತೀಯ ಸಂಸ್ಕೃತಿ ಮತ್ತು ಪೂರ್ವಜರನ್ನು ಗೌರವಿಸಿದರೆ ಅವರೂ ಹಿಂದೂಗಳೇ ಎಂದು ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಚರಿಸಿದರು.
ಇದನ್ನೂ ಓದಿ: ದಿಲ್ಲಿ ಸ್ಫೋಟಕ್ಕೆ ನಡೆದಿತ್ತು 2 ವರ್ಷಗಳ ಸುದೀರ್ಘ ತಯಾರಿ : ವಿಚಾರಣೆ ವೇಳೆ ಬಾಯಿಬಿಟ್ಟ ಡಾ.ಮುಜಮ್ಮಿಲ್



















