ರಾಯಚೂರು : ರಾಜ್ಯದ ಆರು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮಕೃಷ್ಣ ಅಲಿಯಾಸ್ ಗುಜ್ಜಲು ರಾಮಕೃಷ್ಣ ಬಂಧಿತ ಆರೋಪಿಯಾಗಿದ್ದು, ಈತ ಆಂಧ್ರಪ್ರದೇಶದ ಧರ್ಮಾವರಂ ಮೂಲದವನು ಎಂಬುದು ಗೊತ್ತಾಗಿದೆ.
ಕರ್ನಾಟಕದ ರಾಯಚೂರು, ಗೌರಿಬಿದನೂರು, ಹಿರಿಯೂರು, ಹಾವೇರಿ, ಗಂಗಾವತಿ, ಶಿರಾ ಠಾಣೆಗಳ ವ್ಯಾಪ್ತಿಯಲ್ಲಿ ಈತ ಕೈಚಳಕ ತೋರಿಸಿ, ಮನೆಗಳ್ಳತನ ನಡೆಸಿದ್ದ.
ಮೋಸ್ಟ್ ವಾಂಟೆಂಡ್ ಮನೆಗಳ್ಳನಾಗಿದ್ದ ರಾಮಕೃಷ್ಣ, ಮೊಬೈಲ್ ಬಳಸುತ್ತಿರಲಿಲ್ಲ. ರೈಲಿನ ಮೂಲಕ ತಾನು ಟಾರ್ಗೆಟ್ ಮಾಡುವ ನಗರಕ್ಕೆ ಬರುತ್ತಿದ್ದ ಈತ, ಭಿಕ್ಷುಕರ ರೀತಿ ಪೂರ್ತಿ ಏರಿಯಾ ಓಡಾಡುತ್ತಿದ್ದ. ಆ ವೇಳೆ ಯಾವ ಮನೆಗಳಿಗೆ ಬೀಗ ಹಾಕಿದೆ ಎಂಬುದನ್ನು ಗುರುತಿಸಿ, ರಾತ್ರಿ ವೇಳೆ ಅವುಗಳಿಗೆ ಕನ್ನ ಹಾಕುತ್ತಿದ್ದ. ಮನೆಗಳನ್ನ ಎಷ್ಟೇ ಭದ್ರವಾಗಿ ಲಾಕ್ ಮಾಡಿದ್ರೂ ನಿಮಿಷಗಳಲ್ಲೇ ಬಿಗ ಓಡೆದು ಒಳನುಗ್ಗುವ ಕಲೆ ಈತನದಾಗಿದ್ದು, ಮನೆಯಲ್ಲಿದ್ದ ಹಣ ಮತ್ತು ಬಂಗಾರ ಕದ್ದು ಎಸ್ಕೇಪ್ ಆಗುತ್ತಿದ್ದ.
ಇದೇ ನಟೋರಿಯಸ್ ಕಳ್ಳ ರಾಮಕೃಷ್ಣ ರಾಯಚೂರು ನಗರದ ಪಶ್ಚಿಮ ಠಾಣಾ ವ್ಯಾಪ್ತಿ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದ. ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಆರೋಪಿಯ ಫಿಂಗರ್ ಪ್ರಿಂಟ್ ಸಿಕ್ಕಿತ್ತು. ಆ ಸುಳಿವಿನ ಆಧಾರದಲ್ಲಿ ಸುಮಾರು 20 ದಿನಗಳ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಮನೆಗಳ್ಳ ರಾಮಕೃಷ್ಣನಿಂದ 36 ಲಕ್ಷ ಮೌಲ್ಯದ ಸುಮಾರು 315 ಗ್ರಾಂ ಚಿನ್ನಾಭರಣಗಳನ್ನ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ : ನಂದಿನಿ ನದಿ ಅತಿಕ್ರಮಣದ ವಿರುದ್ಧ ಅಧಿಕಾರಿಗಳ ನಿರ್ಲಕ್ಷ್ಯ : ಉಪ ಲೋಕಾಯುಕ್ತ ಖಡಕ್ ಎಚ್ಚರಿಕೆ..!



















