ಬೀದರ್ : ಬೆಂಗಳೂರು ದರೋಡೆ ಪ್ರಕರಣ ಬೆನ್ನಲ್ಲೇ ಬೀದರ್‌ನಲ್ಲಿಯೂ ಭಾರೀ ದರೋಡೆಯೊಂದು ನಡೆದಿದೆ. ಚಲಿಸುತ್ತಿದ್ದ ಕಾರನ್ನು ಪಂಚರ್ ಮಾಡಿ, ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿರುವ ಘಟನೆ ಬಸವಕಲ್ಯಾಣ ನಗರದ ರಾಷ್ಟ್ರೀಯ ಹೆದ್ದಾರಿ 65ರ ಮಂಠಾಳ ಕ್ರಾಸ್ ಹತ್ತಿರ ನಡೆದಿದೆ.
ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಜೀವ ಬೆದರಿಕೆ ಹಾಕಿ ಬರೋಬ್ಬರಿ 23 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿದ್ಧಾರೆ. ಸದ್ಯ ದೂರು ದಾಖಲಿಸಿಕೊಂಡು ಬಸವಕಲ್ಯಾಣ ನಗರ ಠಾಣೆ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ (ನ.20) ಬೆಳಿಗ್ಗೆ 5ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪ್ರವೀಣ್ ಜರಗ ಎಂಬುವವರು ಕಾರಿನಲ್ಲಿ ಮಹಾರಾಷ್ಟ್ರದ ಯೇಥಗಾಂವ್‌ನಿಂದ ಹೈದ್ರಾಬಾದ್‌ನಲ್ಲಿ ನಡೆಯುತ್ತಿದ್ದ ಮದುವೆ ರಿಶಪ್ಶನ್‌ಗೆ ಹೊರಟಿದ್ದರು. ಈ ವೇಳೆ ಬಸವಕಲ್ಯಾಣದ ಸಸ್ತಾಪುರ ಗ್ರಾಮದ ಎನ್‌ಹೆಚ್-65ರಲ್ಲಿ ಹಾದು ಹೋಗುವಾಗ ಚೂಪಾದ ವಸ್ತು ಎಸೆದು ದರೋಡೆಕೋರರು ಕಾರಿನ ಟೈರ್ ಪಂಚರ್ ಮಾಡಿದ್ದಾರೆ.
ಟೈರ್ ಪಂಚರ್ ಆಗುತ್ತಿದ್ದಂತೆ 5ರಿಂದ 6 ಮುಸುಕುದಾರಿಗಳು ಆಗಮಿಸಿ, ಕಾರನ್ನು ಸುತ್ತುವರೆದಿದ್ದಾರೆ. ಚಾಕು ತೋರಿಸಿ ಬೆದರಿಕೆ ಹಾಕಿ, ಸುಮಾರು 1.60 ಲಕ್ಷ ರೂ. ನಗದು, 223 ಗ್ರಾಂ ಬಂಗಾರ ಸೇರಿ 23.90 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ, ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಪ್ರವೀಣ್ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ದರೋಡೆಕೋರರ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ.
ಇದನ್ನೂ ಓದಿ : ಪತ್ನಿ ಜೊತೆ ತಾಜ್ಮಹಲ್ಗೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಪುತ್ರ!



















