ಬೆಂಗಳೂರು: ಐಕಾನಿಕ್ ಕಾರು ತಯಾರಕ ಕಂಪನಿ ಮಿನಿ, ತನ್ನ ಹೊಚ್ಚ ಹೊಸ ಕೂಪರ್ ಕನ್ವರ್ಟಿಬಲ್ ಮಾಡೆಲ್‌ಗಾಗಿ ಭಾರತದಲ್ಲಿ ಪ್ರೀ -ಲಾಂಚ್ (ಬಿಡುಗಡೆ-ಪೂರ್ವ) ಬುಕ್ಕಿಂಗ್‌ಗಳನ್ನು ಆರಂಭಿಸಿದೆ. ಓಪನ್-ಟಾಪ್ ಡ್ರೈವಿಂಗ್ ಅನುಭವ ನೀಡುವ ಈ ಸ್ಟೈಲಿಶ್ ಕಾರು, 2025ರ ಡಿಸೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಲಗ್ಗೆ ಇಡಲಿದೆ. ಆಸಕ್ತ ಗ್ರಾಹಕರು ಮಿನಿಯ ಅಧಿಕೃತ ವೆಬ್‌ಸೈಟ್ ಅಥವಾ ದೇಶಾದ್ಯಂತ ಇರುವ 10 ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ ಈ ಕಾರನ್ನು ಕಾಯ್ದಿರಿಸಬಹುದು.
18 ಸೆಕೆಂಡುಗಳಲ್ಲಿ ಓಪನ್-ಟಾಪ್ ಅನುಭವ
ಹೊಸ ಕನ್ವರ್ಟಿಬಲ್, ಕೂಪರ್ ಎಸ್ ಹ್ಯಾಚ್‌ಬ್ಯಾಕ್‌ನ ವಿನ್ಯಾಸವನ್ನೇ ಆಧರಿಸಿದ್ದರೂ, ತನ್ನ ಎಲೆಕ್ಟ್ರಿಕ್ ಸಾಫ್ಟ್-ಟಾಪ್ ರೂಫ್‌ನಿಂದಾಗಿ ಸಂಪೂರ್ಣ ವಿಭಿನ್ನವಾಗಿದೆ. ಕೇವಲ 18 ಸೆಕೆಂಡುಗಳಲ್ಲಿ ಈ ಫ್ಯಾಬ್ರಿಕ್ ರೂಫ್ ತೆರೆದುಕೊಳ್ಳುತ್ತದೆ ಅಥವಾ ಮುಚ್ಚಿಕೊಳ್ಳುತ್ತದೆ. ವಿಶೇಷವೆಂದರೆ, ಗಂಟೆಗೆ 30 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವಾಗಲೂ ಈ ಕಾರ್ಯಾಚರಣೆ ಸಾಧ್ಯವಾಗಲಿದ್ದು, ಚಲನೆಯಲ್ಲೇ ಓಪನ್-ಏರ್ ಅನುಭವ ಪಡೆಯಲು ಇಷ್ಟಪಡುವವರಿಗೆ ಇದು ಹಬ್ಬದೂಟ ಎನಿಸಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಈ ಕಾರು ಮಿನಿಯ ಕ್ಲಾಸಿಕ್ ವಿನ್ಯಾಸವನ್ನು ಉಳಿಸಿಕೊಂಡಿದೆ. ವೃತ್ತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ದೊಡ್ಡ ಅಷ್ಟಭುಜಾಕೃತಿಯ ಗ್ರಿಲ್ ಮತ್ತು ‘S’ ಬ್ಯಾಡ್ಜ್ ಇದರ ಆಕರ್ಷಣೆಯನ್ನು ಹೆಚ್ಚಿಸಿವೆ. 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಇದು ಹೊಂದಿದೆ. ಹಿಂಭಾಗದಲ್ಲಿ, ಹಾರ್ಡ್‌ಟಾಪ್ ಆವೃತ್ತಿಗಿಂತ ಭಿನ್ನವಾಗಿ, ಯೂನಿಯನ್ ಜ್ಯಾಕ್ ವಿನ್ಯಾಸದ ಆಯತಾಕಾರದ ಎಲ್‌ಇಡಿ ಟೈಲ್-ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.
ಕಾರಿನ ಒಳಭಾಗದಲ್ಲಿ, 9.4-ಇಂಚಿನ ವೃತ್ತಾಕಾರದ ಓಎಲ್‌ಇಡಿ ಟಚ್‌ಸ್ಕ್ರೀನ್ ಪ್ರಮುಖ ಆಕರ್ಷಣೆಯಾಗಿದೆ. ಇದು ಇನ್ಫೋಟೈನ್‌ಮೆಂಟ್ ಮಾತ್ರವಲ್ಲದೆ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯಂತಹ ಪ್ರೀಮಿಯಂ ಫೀಚರ್‌ಗಳನ್ನು ನಿರೀಕ್ಷಿಸಲಾಗಿದೆ.
ಎಂಜಿನ್ ಮತ್ತು ಕಾರ್ಯಕ್ಷಮತೆ
ಹೊಸ ಕೂಪರ್ ಎಸ್ ಕನ್ವರ್ಟಿಬಲ್, 2.0-ಲೀಟರ್, ನಾಲ್ಕು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಶಕ್ತಿ ಪಡೆಯಲಿದೆ. ಈ ಎಂಜಿನ್ 204 bhp ಪವರ್ ಮತ್ತು 300 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಕೇವಲ 6.9 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಮಹೀಂದ್ರಾ XEV 9e ಮತ್ತು BE 6 ಮೇಲೆ 1.55 ಲಕ್ಷ ರೂಪಾಯಿ ವರೆಗೆ ರಿಯಾಯಿತಿ



















