ಉಡುಪಿ : ಕುಂದಾಪುರ ಮೂಲದ ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು, ಕಳೆದ 12 ವರ್ಷಗಳಿಂದ ಯುವ ಪೀಳಿಗೆಗೆ ಸ್ಫೂರ್ತಿ ನೀಡಲು ‘ಕಾರ್ಟೂನ್ ಹಬ್ಬ’ವನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ. ದೇಶ-ವಿದೇಶಗಳಲ್ಲಿ ತಮ್ಮ ತೀಕ್ಷ್ಣ ಕಾರ್ಟೂನ್‌ಗಳಿಂದ ಗುರುತಿಸಿಕೊಂಡಿರುವ ಸತೀಶ್ ಆಚಾರ್ಯ, ಕುಂದಾಪುರದ ಕಾರ್ಟೂನ್ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಯುವಕರಲ್ಲಿ ಕಾರ್ಟೂನ್ ಮತ್ತು ಸುದ್ದಿಗಳ ಬಗ್ಗೆ ಆಸಕ್ತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಈ ಬಾರಿಯ ವಿಶೇಷತೆ ಖಾಕಿಗೊಂದು ಕಾರ್ಟೂನ್ ಸೆಲ್ಯೂಟ್. ಎಡಿಜಿಪಿ ದಯಾನಂದ್ ಇವರ ಉದ್ಘಾಟನೆಯೊಂದಿಗೆ ಪ್ರಾರಂಭವಾದ ಕಾರ್ಟೂನ್ ಹಬ್ಬದಲ್ಲಿ, ಲಾಠಿ, ಬಂದೂಕು ಹಿಡಿಯುತ್ತಿದ್ದ ಕೈಗಳು ಬಣ್ಣದ ಕಡ್ಡಿಯನ್ನು ಹಿಡಿದು ಸುಂದರ ಕಾರ್ಟೂನ್ ಚಿತ್ರಗಳನ್ನು ಬಿಡಿಸಿದ್ದಾರೆ. ನಿತ್ಯ ಜಂಜಾಟದ ನಡುವೆ ಈ ಕಾರ್ಯಕ್ರಮವೊಂದು ಪೊಲೀಸರ ಮುಖದಲ್ಲಿ ಮಂದಹಾಸ ತರಿಸಿದೆ.

ಉಡುಪಿಯಲ್ಲಿ ಇದು ಮೊದಲ ಬಾರಿಯಲ್ಲ, ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯಾದ ಹರಿರಾಮ್ ಶಂಕರ್ ದೈಹಿಕ ಸದೃಢತೆಗಾಗಿ ಪೊಲೀಸರಿಗೆ ಪ್ರಕೃತಿ ಚಿಕಿತ್ಸೆ, ಕರ್ತವ್ಯದ ನಡುವೆ ಮನರಂಜನೆ ಅವಶ್ಯಕ ಎಂದು ಮಹಿಳಾ ಪೊಲೀಸ್ ಪೇದೆಗಳಿಗೆ ಕಾಂತರ ಚಿತ್ರ ಪ್ರದರ್ಶನ, ಇದೀಗ ಸತೀಶ್ ಆಚಾರ್ಯ ಇವರ ಪರಿಕಲ್ಪನೆಯ ಕಾರ್ಟೂನ್‌ನೊಂದಿಗೆ ಖಾಕಿಗೆ ಸೆಲ್ಯೂಟ್ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಆರಕ್ಷಕರ ಒತ್ತಡ ನಿರ್ವಹಣೆ ಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಒಟ್ಟು ನಾಲ್ಕು ದಿನಗಳ ಕಾಲ ನಡೆದ ಕಾರ್ಟೂನ್ ಹಬ್ಬದಲ್ಲಿ ಮೂಲತಃ ಕುಂದಾಪುರದವರಾದ ಈಗ ವಿವಿಧಡೆ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರ ಹಾಗೂ ಹವ್ಯಾಸಿ ವ್ಯಂಗ್ಯ ಚಿತ್ರಕಾರರ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಟೂನ್ ಹಬ್ಬದ ಉದ್ದೇಶ ಹಾಗೂ ಈ ಬಾರಿಯ ವಿಶೇಷತೆ ಕುರಿತಾಗಿ ಆಯೋಜಕರಾದ ಸತೀಶ್ ಆಚಾರ್ಯ ಮಾಹಿತಿಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಪುಟಗಳಲ್ಲಿ ಹೇಳಬಹುದಾದ ಸಂದೇಶವನ್ನು ಕ್ಷಣದಲ್ಲೇ ಚಿತ್ರದ ಮೂಲಕ ತಿಳಿಸುವ ಕಾರ್ಟೂನ್ ಪರಂಪರೆ ಮುಂದುವರೆಯಲಿ ಹಾಗೂ ಆಯೋಜಕರ ಪರಿಕಲ್ಪನೆಯಂತೆ ಯುವಪೀಳಿಗೆ ಸುದ್ದಿಗಳತ್ತ ಆಕರ್ಷಿತರಾಗಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ : ದಾಖಲೆಯ 10ನೇ ಬಾರಿ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ : ಎನ್‌ಡಿಎ ಬೃಹತ್ ಶಕ್ತಿ ಪ್ರದರ್ಶನ



















