ಬೆಂಗಳೂರು : ನಗರದ ಡೈರಿ ಸರ್ಕಲ್ ಬಳಿ ಇಂದು ನಡೆದ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತರ ಫೋಟೊಗಳನ್ನು ಇದೀಗ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ. ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಹಣ ತುಂಬಿಕೊಂಡಿದ್ದ ಸಿಎಂಎಸ್ ಚಾಲಕನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳ ಪತ್ತೆಗೆ ಖಾಕಿ ಬಲೆ ಬೀಸಿದೆ.

ಪ್ರಾಥಮಿಕ ಮಾಹಿತಿ ಅನುಸಾರ ಕೆಲ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದ್ದು, ನಾಕಬಂದಿಯಲ್ಲಿ ಈ ಫೋಟೋ ದಲ್ಲಿರೋ ವ್ಯಕ್ತಿಗಳ ಫೋಟೋ ಮ್ಯಾಚ್ ಮಾಡುವಂತೆ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಖದೀಮರು ಪಕ್ಕಾ ಪ್ಲ್ಯಾನ್ ಮಾಡಿ ಈ ದರೋಡೆ ಮಾಡಿದ್ದಾರೆ. ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದರೋಡೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಅಲ್ಲೇ ಕಾರು ನಿಲ್ಲಿಸಿದ್ದು, ಅದಾದ ನಂತರ ಬೇರೆ ಕಾರಿನಲ್ಲಿ ಬಂದ ಮೂವರು ದರೋಡೆಕೋರರ ಜೊತೆಗೆ ಮಾತುಕತೆ ಮಾಡಿದ್ದಾನೆ. ಅದಾದ ನಂತರ ಎಟಿಎಂ ವಾಹನವನ್ನು ಕಾರು ಫಾಲೋ ಮಾಡಿದೆ. ಡೈರಿ ಸರ್ಕಲ್ ಫ್ಲೈ ಓವರ್‌ನಲ್ಲಿ ರಾಬರಿ ಮಾಡಲಾಗಿದೆ. ಇನ್ನು ಘಟನೆ ನಡೆದು 45 ನಿಮಿಷದಿಂದ 1 ಗಂಟೆ ತಡವಾಗಿ ಪೊಲೀಸರಿಗೆ ಮಾಹಿತಿ ತಲುಪಿಸಿರುವುದು ಕೂಡ ಹಲವು ಅನುಮಾನ ಹುಟ್ಟಿಸಿದೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ : ಪರಮೇಶ್ವರ್
ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ಕಳ್ಳರನ್ನು ನಾವು ಖಂಡಿತಾ ಹಿಡಿಯುತ್ತೇವೆ. ಈಗಲಷ್ಟೇ ಪ್ರಕರಣದ ಲೀಡ್ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ಯಾರು? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರೋ, ಇಲ್ಲವೋ ಅನ್ನೋದು ಗೊತ್ತಿಲ್ಲ. ಈಗಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು, ಆರೋಪಿಗಳು ಬಂದಿರುವ ಕಾರಿನಲ್ಲಿಯೇ ಹಣ ತೆಗೆದುಕೊಂಡು ಹೋಗಿದ್ದಾರೆ. ಕೆಲವು ಮಾಹಿತಿ ಸಿಕ್ಕಿದೆ, ಅದೆಲ್ಲವನ್ನೂ ಹೇಳಲು ಆಗಲ್ಲ. ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಖಂಡಿತವಾಗಿ ಅವರನ್ನು ಹಿಡಿದಾಕುತ್ತೇವೆ. ವೆಹಿಕಲ್ ನಂಬರ್ ಎಲ್ಲ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ ಇಂತಹ ಘಟನೆ ಹಾಡುಹಗಲಲ್ಲೇ ನಡೆದಿಲ್ಲ. ಏಳು ಕೋಟಿಗೂ ಹೆಚ್ಚು ಮೊತ್ತದ ಹಣ ರಾಬರಿಯಾಗಿದೆ. ಕಳ್ಳರು ಇಲ್ಲಿಯವರಾ? ಹೊರ ರಾಜ್ಯದ ವ್ಯಕ್ತಿಗಳಾ ಅನ್ನೋದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರತಿ ವರ್ಷ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ 5 ಪರಿಸರ ವಾದಿಗಳಿಗೆ ಪ್ರಶಸ್ತಿ | ಸಿಎಂ ಸಿದ್ದರಾಮಯ್ಯ ಘೋಷಣೆ



















