ನವದೆಹಲಿ: ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ನಡೆದ ಕನಿಷ್ಠ 26 ಸಶಸ್ತ್ರ ದಾಳಿಗಳ ಹಿಂದಿನ ಸೂತ್ರಧಾರ, ಕುಖ್ಯಾತ ಮಾವೋವಾದಿ ನಾಯಕ ಮದ್ವಿ ಹಿಡ್ಮಾನನ್ನು ಕೊನೆಗೂ ಹತ್ಯೆಗೈಯ್ಯಲಾಗಿದೆ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಡ್ಮಾ ಹತನಾಗಿದ್ದಾನೆ. ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಗಡಿ ಸಂಧಿಸುವ ಪ್ರದೇಶದ ಬಳಿ ಈ ಎನ್‌ಕೌಂಟರ್ ನಡೆದಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಮೂಲಗಳ ಪ್ರಕಾರ, ಘಟನಾ ಸ್ಥಳದಲ್ಲಿ ಕನಿಷ್ಠ ಆರು ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದು, ಭದ್ರತಾ ಪಡೆಗಳ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಹಿಡ್ಮಾನ ತಲೆಗೆ 50 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈ ಎನ್‌ಕೌಂಟರ್‌ನಲ್ಲಿ ಆತನ ಪತ್ನಿ ರಾಜೆ ಅಲಿಯಾಸ್ ರಾಜಕ್ಕ ಕೂಡ ಹತಳಾಗಿದ್ದಾಳೆ ಎಂದು ತಿಳಿದುಬಂದಿದೆ.
ಹಿಡ್ಮಾನ ಹಿನ್ನೆಲೆ
1981ರಲ್ಲಿ ಮಧ್ಯಪ್ರದೇಶದ ಸುಕ್ಮಾದಲ್ಲಿ ಜನಿಸಿದ್ದ ಹಿಡ್ಮಾ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ (PLGA) ಬೆಟಾಲಿಯನ್ ಮುಖ್ಯಸ್ಥನಾಗಿ ಬೆಳೆದಿದ್ದ. ಸಿಪಿಐ (ಮಾವೋವಾದಿ) ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕೇಂದ್ರ ಸಮಿತಿಯ ಅತ್ಯಂತ ಕಿರಿಯ ಸದಸ್ಯನಾಗಿದ್ದ. ಬಸ್ತಾರ್ ಪ್ರದೇಶದಿಂದ ಕೇಂದ್ರ ಸಮಿತಿಯಲ್ಲಿದ್ದ ಏಕೈಕ ಬುಡಕಟ್ಟು ಸದಸ್ಯ ಎಂಬುದು ಆತನ ಪ್ರಭಾವಕ್ಕೆ ಸಾಕ್ಷಿಯಾಗಿತ್ತು.
ಪ್ರಮುಖ ದಾಳಿಗಳು
ಹಿಡ್ಮಾ ದೇಶಾದ್ಯಂತ ಭದ್ರತಾ ಪಡೆಗಳ ಮೇಲೆ ನಡೆದ ಹಲವು ಭೀಕರ ದಾಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
2010 ದಂತೇವಾಡ ದಾಳಿ: ನಕ್ಸಲರು ನಡೆಸಿದ ಈ ದಾಳಿಯಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.
2013 ಜಿರಂ ಘಾಟಿ ದಾಳಿ: ಛತ್ತೀಸ್‌ಗಢದ ಪ್ರಮುಖ ಕಾಂಗ್ರೆಸ್ ನಾಯಕರು ಸೇರಿದಂತೆ 27 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದರು.
2021 ಸುಕ್ಮಾ-ಬಿಜಾಪುರ ದಾಳಿ: 22 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಈ ದಾಳಿಗಳ ಮೂಲಕ ಹಿಡ್ಮಾ ಭದ್ರತಾ ಪಡೆಗಳಿಗೆ ದೊಡ್ಡ ತಲೆನೋವಾಗಿದ್ದ. ಆತನ ಹತ್ಯೆ ಮಾವೋವಾದಿ ಚಟುವಟಿಕೆಗಳಿಗೆ ಬಿದ್ದ ದೊಡ್ಡ ಹೊಡೆತವೆಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ; FIR ದಾಖಲು



















