ಕಲಬುರಗಿ: ಆರ್‌ಎಸ್‌ಎಸ್ 100 ವರ್ಷಗಳಲ್ಲಿ ಮೊದಲ ಬಾರಿಗೆ ಚಿತ್ತಾಪುರದಲ್ಲಿ ಕಾನೂನು ಮತ್ತು ಸಾಂವಿಧಾನಿಕ ಅನುಮತಿಯೊಂದಿಗೆ ಪಥಸಂಚಲನ ನಡೆಸುವ ಮೂಲಕ ನಿಯಮಗಳನ್ನು ಪಾಲಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಪಥಸಂಚಲನ ನಡೆಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಂಕ ಖರ್ಗೆ, ‘ನಾನು ಪಥಸಂಚಲನವನ್ನು ಎಂದಿಗೂ ವಿರೋಧಿಸಿಲ್ಲ. ನಾನು ಹೇಳಿದ್ದು ಅನುಮತಿ ಪಡೆಯಬೇಕು ಎಂದು ಮಾತ್ರ. ಅವರಿಗೆ ಕಾನೂನಿನ ನಿಯಮವನ್ನು ಪಾಲಿಸದಿರುವ ಅಭ್ಯಾಸವಿದೆ. ಈಗ ಅವರು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅವರು ಅದನ್ನು ಮಾಡಲಿ’ ಎಂದು ಹೇಳಿದ್ದಾರೆ.
‘ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಅವರು ಷರತ್ತುಗಳನ್ನು ಪಾಲಿಸದಿದ್ದರೆ, ಅವರು ಕಾನೂನಿನ ಪ್ರಕಾರ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇಲ್ಲಿ ಏನು ಸಮಸ್ಯೆ? ಮೊದಲು, ಅವರು ಈ ಬಗ್ಗೆ ತಿಳಿಸುತ್ತಿದ್ದರು. ಆದರೆ ಈಗ ಅವರು ಅನುಮತಿ ಪಡೆಯುತ್ತಿದ್ದಾರೆ. ನಾವು ಅವರನ್ನು ಕಾನೂನು ಮತ್ತು ಸಂವಿಧಾನವನ್ನು ಪಾಲಿಸುವಂತೆ ಕೇಳಿಕೊಂಡಿದ್ದೇವೆ. ಅದನ್ನು ಅವರು 100 ವರ್ಷಗಳಲ್ಲಿ ಮೊದಲ ಬಾರಿಗೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಖರ್ಗೆ ತವರಿನಲ್ಲಿ ಯಶಸ್ವಿಯಾಗಿ ನಡೆದ RSS ಪಥಸಂಚಲನ | ಭಗವಾಧ್ವಜ ಹಾರಿಸಿ ಹೆಜ್ಜೆ ಹಾಕಿದ ಕಾರ್ಯಕರ್ತರು



















