ನವದೆಹಲಿ : ಇಡೀ ರಾಷ್ಟ್ರವೇ ಎದುರು ನೋಡ್ತಿದ್ದ ಬಿಹಾರ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಸಮೀಕ್ಷೆಗಳೂ ಊಹಿಸದ ರೀತಿ ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಪ್ರಚಂಡ ಬಹುಮತ ಸಿಕ್ಕಿದೆ. ಈ ಬಾರಿ ನಮ್ದೆ ಸರ್ಕಾರ ಅಂತಿದ್ದ ಕಾಂಗ್ರೆಸ್, ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಹೆಳ ಹೆಸರಿಲ್ಲದಂತಾಗಿದೆ. ಇತ್ತ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಜೋರಾಗಿದೆ. ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಹಾರದಲ್ಲಿ ‘ಕಟ್ಟಾ ಸರ್ಕಾರ್’ ಇನ್ನೆಂದಿಗೂ ಬರೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಜಯೋತ್ಸವ ಭಾಷಣದಲ್ಲಿ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಷಷ್ಠಿ ದೇವತೆ ಛಠಿ ಮೈಯಾ ನೆನೆಯುತ್ತಾ ಮಾತನಾಡಿದ ಪ್ರಧಾನಿ ಮೋದಿ, ನಾನು ಚುನಾವಣೆ ವೇಳೆ ʻಜಂಗಲ್ ರಾಜ್ʼ ಮತ್ತು ʻಕಟ್ಟಾ ಸರ್ಕಾರ್ʼ ಬಗ್ಗೆ ಮಾತನಾಡಿದಾಗೆಲ್ಲ ಆರ್‌ಜೆಡಿಯಿಂದ ಯಾವುದೇ ವಿರೋಧ ಕೇಳಿಬರುತ್ತಿರಲಿಲ್ಲ. ಆದ್ರೆ ಕಾಂಗ್ರೆಸ್‌ಗೆ ಮಾತ್ರ ನೋವುಂಟಾಗಿತ್ತು. ನಾನು ಮತ್ತೆ ಹೇಳುವೆ ಬಿಹಾರದಲ್ಲಿ ʻಕಟ್ಟಾ ಸರ್ಕಾರ್ʼ ಇನ್ನೆಂದಿಗೂ ಬರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಜನರ ಸೇವಕರು, ನಮ್ಮ ಕಠಿಣ ಪರಿಶ್ರಮದಿಂದ ಜನರನ್ನ ಸಂತೋಷಪಡಿಸುತ್ತಲೇ ಇರುತ್ತೇವೆ. ಲಕ್ಷಾಂತರ ಜನರ ಹೃದಯ ಕದ್ದಿದ್ದೇವೆ. ಅದಕ್ಕಾಗಿಯೇ ಇಡಿ ಬಿಹಾರ ʻಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್ʼ (ಮತ್ತೊಮ್ಮೆ ಎನ್‌ಡಿಎ ಸರ್ಕಾರ) ಅಂತ ಹೇಳಿದೆ. ಎನ್‌ಡಿಎಗೆ ಪ್ರಚಂಡ ಗೆಲುವು ನೀಡಬೇಕು ಅಂತ ಬಿಹಾರದ ಜನರನ್ನ ಕೇಳಿಕೊಂಡಿದ್ದೆ, ನನ್ನ ಒಂದು ಕೂಗಿಗೆ ಅವರು ಕಿವಿಗೊಟ್ಟಿದ್ದಾರೆ. 2010 ರಿಂದ ಈಚೆಗೆ ಮೈತ್ರಿಕೂಟಕ್ಕೆ ಅತಿದೊಡ್ಡ ಅಂತರದ ಗೆಲುವು ನೀಡಿದ್ದಾರೆ. ಅದಕ್ಕಾಗಿ ಇಡೀ ಎನ್‌ಡಿಎ ಕುಟುಂಬದ ಪರವಾಗಿ, ನಾನು ಬಿಹಾರದ ಎಲ್ಲಾ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಭಾವುಕರಾಗಿದ್ಧಾರೆ.
ಇದನ್ನೂ ಓದಿ : ರಾಯಚೂರಲ್ಲಿ ಬೈಕ್‌ಗಳ ನಡುವೆ ಭೀಕರ ಅಪಘಾತ | ಇಬ್ಬರು ಸಾವು.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!



















