ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಇಡೀ ರಾಜ್ಯದ ಚಿತ್ತವನ್ನು ತನ್ನತ್ತ ಸೆಳೆದಿದ್ದ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ ಕ್ಷೇತ್ರದಲ್ಲೇ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಇದು ಆರ್‌ಜೆಡಿ ಪಕ್ಷದ ಪಾಳಯದಲ್ಲಿ ಭಾರೀ ಆತಂಕಕ್ಕೆ ಹಾಗೂ ಅಚ್ಚರಿಗೆ ಕಾರಣವಾಗಿದೆ.
ಮತ ಎಣಿಕೆ ಆರಂಭವಾಗಿ ಮೂರೂವರೆ ಗಂಟೆ ಕಳೆದರೂ, ಬೆಳಗ್ಗೆ 11:30ರ ವೇಳೆಗೆ ತೇಜಸ್ವಿ ಯಾದವ್ ಅವರು ತಮ್ಮ ಪ್ರತಿಸ್ಪರ್ಧಿ, ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಅವರಿಗಿಂತ 3,000ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದರು. ಈ ಅನಿರೀಕ್ಷಿತ ತಿರುವು, ಮಹಾಘಟಬಂಧನ್‌ಗೆ ದೊಡ್ಡ ಆಘಾತ ತಂದೊಡ್ಡಿದೆ.
ವಿಶ್ವಾಸ ವ್ಯಕ್ತಪಡಿಸಿದ್ದ ತೇಜಸ್ವಿ
ಇಂದು ಬೆಳಗ್ಗೆ ಮತ ಎಣಿಕೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ 36 ವರ್ಷದ ತೇಜಸ್ವಿ ಯಾದವ್, “ಇದು ಜನರ ಗೆಲುವಾಗಲಿದೆ. ಖಂಡಿತವಾಗಿಯೂ ಬದಲಾವಣೆ ಬರಲಿದೆ. ನಾವು ಸರ್ಕಾರ ರಚಿಸುತ್ತೇವೆ,” ಎಂದು ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಫಲಿತಾಂಶದ ಟ್ರೆಂಡ್‌ಗಳು ಅವರ ವಿಶ್ವಾಸವನ್ನು ಹುಸಿಗೊಳಿಸುವಂತೆ ಕಾಣುತ್ತಿದೆ.
ರಾಘೋಪುರದ ರಾಜಕೀಯ ಹಿನ್ನೆಲೆ
ರಾಘೋಪುರ ಕ್ಷೇತ್ರವು ಮೊದಲಿನಿಂದಲೂ ಆರ್‌ಜೆಡಿಯ ಭದ್ರಕೋಟೆ. ಈ ಹಿಂದೆ ತೇಜಸ್ವಿ ಯಾದವ್ ಅವರ ತಂದೆ, ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ರಿ ದೇವಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2015ರಿಂದ ತೇಜಸ್ವಿ ಯಾದವ್ ಇಲ್ಲಿ ಶಾಸಕರಾಗಿದ್ದು, 2020ರ ಚುನಾವಣೆಯಲ್ಲಿ ಬರೋಬ್ಬರಿ 38,000 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದ್ದರು. ಇಂತಹ ಭದ್ರಕೋಟೆಯಲ್ಲೇ ಅವರು ಹಿನ್ನಡೆ ಅನುಭವಿಸಿರುವುದು ಪಕ್ಷಕ್ಕೆ ನಂಬಲಾಗದಂಥ ಆಘಾತ ನೀಡಿದೆ.
ಈ ಬಾರಿ ಬಿಜೆಪಿಯು ಸತೀಶ್ ಕುಮಾರ್ ಯಾದವ್ ಅವರನ್ನು ರಾಘೋಪುರದಿಂದ ಕಣಕ್ಕಿಳಿಸಿತ್ತು. ವಿಶೇಷವೆಂದರೆ, ಇದೇ ಸತೀಶ್ ಕುಮಾರ್ ಅವರು 2010ರ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಬ್ರಿ ದೇವಿ ಅವರನ್ನು ಸೋಲಿಸಿದ್ದರು. ಇದರೊಂದಿಗೆ, ತೇಜಸ್ವಿ ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಸ್ಥಾಪಿಸಿರುವ ‘ಜನಶಕ್ತಿ ಜನತಾ ದಳ’ ಪಕ್ಷದ ಅಭ್ಯರ್ಥಿ ಪ್ರೇಮ್ ಕುಮಾರ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಅಲ್ಲದೆ, ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿತ್ತು.
ಇದನ್ನೂ ಓದಿ : ಬಿಹಾರದಲ್ಲೂ ವೋಟ್ ಚೋರಿ ಆಗಿದೆ | ಸಿಎಂ ಸಿದ್ದರಾಮಯ್ಯ



















