ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಂತೆ, ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯವು (Al Falah University) ಉಗ್ರರ ಸಂಚಿನ ಕೇಂದ್ರಬಿಂದು ಎಂಬುದು ಬಯಲಾಗಿದೆ. ಇದೇ ವಿವಿಯ ಕಟ್ಟಡವೊಂದರ ಕೊಠಡಿಯಲ್ಲಿ ಭಯೋತ್ಪಾದಕರು ರಹಸ್ಯ ಸಭೆಗಳನ್ನು ನಡೆಸಿ, ದೆಹಲಿಯನ್ನು ನಡುಗಿಸುವ ಯೋಜನೆ ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.
ವೈದ್ಯರ ಸೋಗಿನಲ್ಲಿ ಉಗ್ರರು
ಈ ಪ್ರಕರಣದ ಕೇಂದ್ರಬಿಂದುವಾಗಿರುವುದು ವಿವಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ವೈದ್ಯರು. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಡಾ. ಉಮರ್ ಮೊಹಮ್ಮದ್, ಡಾ. ಮುಜಮ್ಮಿಲ್ ಶಕೀಲ್, ಡಾ. ಆದಿಲ್ ರಾಥರ್, ಮತ್ತು ಡಾ. ಶಹೀನಾ ಸಯೀದ್ ಈ ಕೃತ್ಯದ ರೂವಾರಿಗಳು. ಇವರಲ್ಲಿ ಡಾ. ಉಮರ್ ಸ್ಫೋಟದಲ್ಲಿ ಮೃತಪಟ್ಟಿದ್ದು, ಉಳಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಚಿನ ಅಡ್ಡೆ: ಬಿಲ್ಡಿಂಗ್ 17, ರೂಮ್ 13
70 ಎಕರೆ ವಿಸ್ತೀರ್ಣದ ಅಲ್-ಫಲಾಹ್ ವಿವಿಯ 17ನೇ ಕಟ್ಟಡದಲ್ಲಿರುವ 13ನೇ ಸಂಖ್ಯೆಯ ಕೊಠಡಿಯೇ ಉಗ್ರರ ರಹಸ್ಯ ಸಭೆಗಳ ಅಡ್ಡೆಯಾಗಿತ್ತು. ಈ ಕೊಠಡಿಯು ಬಂಧಿತ ಡಾ. ಮುಜಮ್ಮಿಲ್‌ಗೆ ಸೇರಿದ್ದಾಗಿದ್ದು, ಇಲ್ಲಿಯೇ ಉಗ್ರರು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸರಣಿ ಸ್ಫೋಟ ನಡೆಸುವ ಸಂಪೂರ್ಣ ಯೋಜನೆ ರೂಪಿಸಿದ್ದರು. ವಿವಿಯ ಪ್ರಯೋಗಾಲಯದಿಂದ ರಾಸಾಯನಿಕಗಳನ್ನು ಕದ್ದು, ಸ್ಫೋಟಕಗಳನ್ನು ತಯಾರಿಸಲು ಇವರು ಸಂಚು ಹೂಡಿದ್ದರು.
ಸ್ಫೋಟಕ್ಕೆ 20 ಲಕ್ಷ ರೂ. ಫಂಡಿಂಗ್
ದೆಹಲಿಯಲ್ಲಿ ದಾಳಿ ನಡೆಸಲು ಈ ನಾಲ್ವರು ವೈದ್ಯರು 20 ಲಕ್ಷ ರೂಪಾಯಿ ಹಣ ಸಂಗ್ರಹಿಸಿದ್ದರು. ಈ ಹಣದಲ್ಲಿ 3 ಲಕ್ಷ ರೂಪಾಯಿ ಬಳಸಿ, ಗುರುಗ್ರಾಮ ಮತ್ತು ನುಹ್‌ನ ಮಾರುಕಟ್ಟೆಗಳಿಂದ ಸುಮಾರು 26 ಕ್ವಿಂಟಾಲ್ ರಸಗೊಬ್ಬರವನ್ನು ಖರೀದಿಸಿದ್ದರು. ಈ ರಸಗೊಬ್ಬರವನ್ನು ಸುಧಾರಿತ ಸ್ಫೋಟಕ ಸಾಧನ (IED) ತಯಾರಿಕೆಗೆ ಬಳಸಲು ಉದ್ದೇಶಿಸಲಾಗಿತ್ತು.
ಕೋಡ್‌ವರ್ಡ್ ಡೈರಿಗಳು ಪತ್ತೆ
ಪೊಲೀಸರು ಡಾ. ಮುಜಮ್ಮಿಲ್‌ನ ಕೊಠಡಿಯನ್ನು ಸೀಲ್ ಮಾಡಿದ್ದು, ಅಲ್ಲಿಂದ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕೋಡ್‌ವರ್ಡ್‌ಗಳಿಂದ ತುಂಬಿದ ಎರಡು ಡೈರಿಗಳನ್ನು ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿ ‘ಆಪರೇಷನ್’ ಎಂಬ ಪದವನ್ನು ಪದೇ ಪದೇ ಉಲ್ಲೇಖಿಸಲಾಗಿದೆ. ವಿಧಿವಿಜ್ಞಾನ ತಜ್ಞರು ಕೊಠಡಿ ಮತ್ತು ಲ್ಯಾಬ್‌ನಿಂದ ರಾಸಾಯನಿಕಗಳ ಕುರುಹುಗಳನ್ನು ಸಹ ಪತ್ತೆಹಚ್ಚಿದ್ದಾರೆ. ಈ ನಡುವೆ, ಅಲ್-ಫಲಾಹ್ ವಿವಿಯು ಈ ಘಟನೆಯನ್ನು ಖಂಡಿಸಿದ್ದು, ಬಂಧಿತ ವೈದ್ಯರಿಗೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ರಾತ್ರಿಯಿಡೀ ಕಾರಿನಲ್ಲಿಯೇ ಕಳೆದಿದ್ದ ಬಾಂಬರ್ ಉಮರ್ | ಸ್ಫೋಟಕ್ಕೂ ಮುನ್ನ ಮಸೀದಿಗೆ ಭೇಟಿ!



















