ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಣ ಇಂದು (ನ.13) ನಡೆಯಬೇಕಿದ್ದ ಎರಡನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಶ್ರೀಲಂಕಾ ತಂಡದ 8 ಆಟಗಾರರು ತವರಿಗೆ ತೆರಳುವುದಾಗಿ ತಿಳಿಸಿದ್ದರು. ಇದೇ ಕಾರಣದಿಂದಾಗಿ ಇಂದು ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ 2ನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಶ್ರೀಲಂಕಾದ ಕೆಲ ಆಟಗಾರರು ತಮ್ಮ ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ ತವರಿಗೆ ಮರಳಲು ಬಯಸಿದ್ದಾರೆ. ಇದಾಗ್ಯೂ ಈ ಸರಣಿಯನ್ನು ಮುಂದುವರೆಸುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಉಳಿದ ಪಂದ್ಯಗಳ ದಿನಾಂಕವನ್ನು ಮರುನಿಗದಿ ಮಾಡಿದೆ.
ಅದರಂತೆ ಇಂದು ನಡಯಬೇಕಿದ್ದ 2ನೇ ಏಕದಿನ ಪಂದ್ಯವನ್ನು ಶುಕ್ರವಾರ ಆಡಲಾಗುತ್ತದೆ ಎಂದು ತಿಳಿಸಲಾಗಿದೆ. ಹಾಗೆಯೇ ನವೆಂಬರ್ 15ಕ್ಕೆ ನಿಗದಿಯಾಗಿದ್ದ ಮೂರನೇ ಮ್ಯಾಚ್ ಭಾನುವಾರ ನಡೆಯಲಿದೆ. ಈ ಮೂಲಕ ಸರಣಿಯನ್ನು ಪೂರ್ಣಗೊಳಿಸಲು ಪಿಸಿಬಿ ಪ್ಲ್ಯಾನ್ ರೂಪಿಸಿದೆ. ಯಾವುದೇ ಆಟಗಾರನು ಅರ್ಧದಲ್ಲೇ ಸರಣಿ ತೊರೆದರೂ, ಬದಲಿ ಆಟಗಾರರನ್ನು ಕಳುಹಿಸಿ ಕೊಡುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಹೀಗಾಗಿಯೇ ಇಂದು (ನ.13) ನಡೆಯಬೇಕಿದ್ದ ಪಂದ್ಯವನ್ನು ಮರು ನಿಗದಿ ಮಾಡಲಾಗಿದೆ.
ಇದನ್ನೂ ಓದಿ : ರಾತ್ರಿಯಿಡೀ ಕಾರಿನಲ್ಲಿಯೇ ಕಳೆದಿದ್ದ ಬಾಂಬರ್ ಉಮರ್ | ಸ್ಫೋಟಕ್ಕೂ ಮುನ್ನ ಮಸೀದಿಗೆ ಭೇಟಿ!


















