ಬೆಂಗಳೂರು: ದೇಶದಲ್ಲಿ ಚಿನ್ನ ಖರೀದಿಯು ಈಗ ಕೇವಲ ಸಾಂಪ್ರದಾಯಿಕವಾಗಿ ಉಳಿದಿಲ್ಲ. ಚಿನ್ನಾಭರಣಗಳ ಖರೀದಿ ಜತೆಗೆ, ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್ ಸೇರಿ ಹಲವು ಮಾದರಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಆದರೆ, ಡಿಜಿಟಲ್ ಗೋಲ್ಡ್ ನಲ್ಲಿ (Digital Gold) ಹೂಡಿಕೆ ಮಾಡುವವರಿಗೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ)ಯು ಎಚ್ಚರಿಕೆ ನೀಡಿದೆ. ಇದರಿಂದಾಗಿ ಹೂಡಿಕೆದಾರರು ಈಗ ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿದ್ದಾರೆ.
ಡಿಜಿಟಲ್ ಚಿನ್ನದ ಮೇಲೆ ಮಾಡಿದ ಹೂಡಿಕೆಗೆ ಬಂಡವಾಳ ಮಾರುಕಟ್ಟೆಯಲ್ಲಿ ಯಾವುದೇ ರಕ್ಷಣೆ ಇರುವುದಿಲ್ಲ. ಇದರಿಂದ ಹೂಡಿಕೆದಾರರು ಸೆಬಿ ರಕ್ಷಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾಗೆಯೇ, ಈಗಾಗಲೇ ಹೂಡಿಕೆ ಮಾಡಿರುವವರಿಗೆ ಆತಂಕ ಮೂಡಿದೆ.
ಕೆಲವು ಆ್ಯಪ್ ಗಳು ಅಥವಾ ಆನ್ ಲೈನ್ ವೇದಿಕೆಗಳು ಡಿಜಿಟಲ್ ಗೋಲ್ಡ್ ಅಥವಾ ಇ-ಗೋಲ್ಡ್ ಎಂಬ ಹೆಸರಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ ನೀಡುತ್ತಿವೆ. ಆದರೆ, ಇಂತಹ ಗೋಲ್ಡ್ ಖರೀದಿಯು ಸೆಬಿ ನಿಯಂತ್ರಿತ ಹೂಡಿಕೆಗಳಿಗಿಂತ ಭಿನ್ನವಾಗಿವೆ. ಇವು ಸೆಬಿಯ ನಿಯಂತ್ರಣಕ್ಕೆ ಒಳಪಡುವುದಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ. ಅಲ್ಲಿಗೆ, ಹೂಡಿಕೆದಾರರು ಹಣ ಕಳೆದುಕೊಂಡರೆ ಕಾನೂನು ಹೋರಾಟ ಮಾಡಲು ಆಗುವುದಿಲ್ಲ ಎಂದು ಸೆಬಿ ಸ್ಪಷ್ಟವಾಗಿ ತಿಳಿಸಿದೆ.
ಆದಾಗ್ಯೂ, ಗೋಲ್ಡ್ ಇಟಿಎಫ್ ಗಳು ಹಾಗೂ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಬಳಸುವ ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ ಗಳ ಮೇಲೆ ಹೂಡಿಕೆ ಮಾಡಲು ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಏಕೆಂದರೆ, ಇಟಿಫ್ ಗಳನ್ನು ನೀಡುವ ಮ್ಯೂಚುವಲ್ ಫಂಡ್ ಕಂಪನಿಗಳು ಸೆಬಿ ಅಡಿಯಲ್ಲಿ ರಿಜಿಸ್ಟರ್ ಆಗಿರುತ್ತವೆ. ಆದರೆ, ಡಿಜಿಟಲ್ ಗೋಲ್ಡ್ ಹೂಡಿಕೆಗೆ ಅವಕಾಶ ಮಾಡಿಕೊಡುವ ಕಂಪನಿಗಳು ನೋಂದಣಿ ಮಾಡಿಕೊಂಡಿರದ ಕಾರಣ ಸೆಬಿ ಹೀಗೆ ಸ್ಪಷ್ಟನೆ ನೀಡಿದೆ. ಡಿಜಿಟಲ್ ಗೋಲ್ಡ್ ಎನ್ನುವುದು ಭೌತಿಕ ಚಿನ್ನಕ್ಕಿಂತ ಭಿನ್ನವಾಗಿರುತ್ತದೆ. ಚಿನ್ನದ ಮಾರುಕಟ್ಟೆ ಬೆಲೆಯೇ ಡಿಜಿಟಲ್ ಗೋಲ್ಡ್ ಖರೀದಿಯಲ್ಲೂ ಸಿಗುತ್ತದೆ.
ಇದನ್ನೂ ಓದಿ: ವೀಸಾ, ಪಾಸ್‌ಪೋರ್ಟ್ ಅವಧಿ ಮುಗಿದಿದ್ರು ಅಕ್ರಮವಾಗಿ ಬೆಂಗಳೂರಲ್ಲಿ ನೆಲೆಸಿದ್ದ ಮಹಿಳೆ ವಶ



















