ಬೆಂಗಳೂರು : ಬೆಂಗಳೂರಿನಲ್ಲಿ ದಂಪತಿ ಹಾಗೂ ಆಟೋ ಚಾಲಕನ ನಡುವೆ ಡ್ರಾಪ್ ಪಾಯಿಂಟ್ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ ದಂಪತಿ ಆಟೋ ಚಾಲಕನನ್ನು ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಂಪತಿಗಳ ವರ್ತನೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯ ಭಾಷೆ ಮತ್ತು ನಡವಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಿಗರ ಮೇಲೆ ಪ್ರತಿನಿತ್ಯ ಇಂಥಹ ದಬ್ಬಾಳಿಕೆ ನಡೆಯುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದಾರೆ. ಸರಿಯಾದ ಸ್ಥಳಕ್ಕೆ ಬಿಟ್ಟಲ್ಲ ಎಂದು ಉತ್ತರ ಭಾರತದ ದಂಪತಿಗಳು ಆಟೋ ಚಾಲಕನಿಗೆ ಕೆಟ್ಟದಾಗಿ ಬೈದಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿ ದಂಪತಿಗಳು ಹಿಂದಿಯಲ್ಲಿ ಮಾತನಾಡುವುದನ್ನು ಕಾಣಬಹುದು. ಆಟೋ ಚಾಲಕನಿಗೆ, ನೀನು ಸರಿಯಾದ ಸ್ಥಳಕ್ಕೆ ಯಾಕೆ ಬಿಟ್ಟಿಲ್ಲ, ನಿನಗೆ ಬೆತ್ತಲೆಯಾಗಿ ಹೊಡೆಯುತ್ತೇನೆ ಎಂದು ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಆಟೋ ಚಾಲಕ ವಿಡಿಯೋ ರೆಕಾರ್ಡ್ ಮಾಡುವುದನ್ನು ನೋಡಿ, ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಟೋ ಚಾಲಕ ಇನ್ನು ನಾನು ಮಾತನಾಡುವುದಿಲ್ಲ, ಪೊಲೀಸರು ಬರಲಿ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನು ಈ ವ್ಯಕ್ತಿ ಆಟೋಗೆ ಕೋಪದಲ್ಲಿ ಒದ್ದಿರುವುದು ಕೂಡ ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ : ನಕ್ಸಲಿಸಂ ತೊರೆದು ಮುಖ್ಯವಾಹಿನಿಗೆ ಬಂದಿದ್ದ ಮಹಿಳೆಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್!



















