ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್ ಹ್ಯಾಕ್ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ವಂಚಕನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ವಿಕಾಸ್ ಕುಮಾರ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

ಸೆಪ್ಟೆಂಬರ್ 15ರಂದು ಬೆಳಗ್ಗೆ ಪ್ರಿಯಾಂಕಾ ಅವರಿಗೆ ಕರೆ ಮಾಡಿದ್ದ ಆರೋಪಿ, “ನಿಮ್ಮ ಆರ್ಡರ್ ಡೆಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇವೆ” ಎಂದು ಹ್ಯಾಶ್ ಟ್ಯಾಗ್ ಸಹಿತ ಒಂದು ನಂಬರ್ ಹೇಳಿದ್ದ. ಆ ನಂಬರ್ ಡಯಲ್ ಮಾಡುತ್ತಿದ್ದಂತೆಯೇ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿತ್ತು.

ಫೋನ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂದು ಭಾವಿಸಿದ್ದ ಪ್ರಿಯಾಂಕಾ ಅವರು ಪತಿ ಉಪೇಂದ್ರ ಹಾಗೂ ಕುಟುಂಬದ ಪರಿಚಿತರಾದ ಮಹಾದೇವ್ ಅವರ ಫೋನ್‌ಗಳಿಂದ ಅದೇ ನಂಬರ್ ಡಯಲ್ ಮಾಡಿದ್ದರು. ಕೂಡಲೇ ಆ ಫೋನ್‌ಗಳೂ ಸಹ ಹ್ಯಾಕ್ ಆಗಿದ್ದವು. ಬಳಿಕ ವಾಟ್ಸ್ಆ್ಯಪ್ ಖಾತೆಗಳನ್ನು ನಿಯಂತ್ರಣಕ್ಕೆ ಪಡೆದುಕೊಂಡಿದ್ದ ಆರೋಪಿ, “ತುರ್ತಾಗಿ ಹಣದ ಅಗತ್ಯವಿದೆ” ಎಂದು ಹಲವರಿಗೆ ಸಂದೇಶ ಕಳುಹಿಸಿದ್ದ. ಆ ವೇಳೆ ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿರಬಹುದು ಎಂದು ಕೆಲವರು ಹಣ ಹಾಕಿದ್ದಾರೆ. ಸ್ವತಃ ಉಪೇಂದ್ರ ಅವರ ಪುತ್ರ ಸಹ 50,000 ರೂಪಾಯಿ ಹಣ ವರ್ಗಾಯಿಸಿದ್ದರು. ಕೂಡಲೇ ಉಪೇಂದ್ರ ದಂಪತಿ ಖುದ್ದು ಸದಾಶಿವನಗರ ಠಾಣೆ ಹಾಗೂ ಕೇಂದ್ರ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
ನಾಲ್ಕು ವಿವಿಧ ಖಾತೆಗಳಿಗೆ ಸುಮಾರು 1.65 ಲಕ್ಷ ರೂಪಾಯಿ ವರ್ಗಾವಣೆಯಾಗಿತ್ತು. ಬಿಹಾರದಲ್ಲಿ 20 ರಿಂದ 25 ವಯಸ್ಸಿನ ಯುವಕರೇ ಸೇರಿ ಈ ದಂಧೆಯಲ್ಲಿ ನಿರತರಾಗಿದ್ದು, ಅಲ್ಲಿ 100ಕ್ಕೂ ಹೆಚ್ಚು ಮಂದಿ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿ ವಿಕಾಸ್ ಕುಮಾರ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸದಾಶಿವನಗರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕೆ ಶಾಕ್ | SIT ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್!


















