ಇಸ್ಲಾಮಾಬಾದ್ : ಪಾಕಿಸ್ತಾನ ರಾಜಧಾನಿ ಇಸ್ಲಾಬಾದ್ನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ಹೊರಗೆ ಆತ್ಮಹುತಿ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ 12 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಇಸ್ಲಾಮಾಬಾದ್ನ ಹಿರಿಯ ಪೊಲೀಸ್ ಅಧಿಕಾರಿ ದೃಢಪಡಿಸಿದ್ದು, ಈ ಸ್ಫೋಟಕ್ಕೆ ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಈ ಕುರಿತು ತನಿಖೆ ಸಾಗಿದೆ ಎಂದು ತಿಳಿದುಬಂದಿದೆ.

ಸ್ಫೋಟ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡುತ್ತಿದ್ದು, ಎಲ್ಲೆಡೆ ಬೆಂಕಿಯ ದಟ್ಟ ಹೊಗೆ ಆವರಿಸಿದೆ. ಸ್ಫೋಟದ ನಂತರ ಭದ್ರತಾ ತಡೆಗೋಡೆಯ ಹಿಂದೆ ಸುಟ್ಟ ವಾಹನದ ಅವಶೇಷಗಳು ಕಂಡುಬಂದಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ಪಾಕಿಸ್ತಾನ ವಿಜ್ಞಾನ ವೈದ್ಯಕೀಯ ಸಂಸ್ಥೆ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರ ಮಟ್ಟದಲ್ಲಿ ಸ್ಫೋಟಕ್ಕೆ ಸುಮಾರು ಆರು ಕಿಲೋ ಮೀಟರ್ ವರೆಗೆ ಶಬ್ಧ ಕೇಳಿಸಿದ್ದು, ರಕ್ಷಣಾ ಮತ್ತು ತನಿಖಾ ತಂಡ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸುತ್ತಿದೆ.
ಈ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಗುಂಪು ಅಥವಾ ವ್ಯಕ್ತಿಗಳು ಹೊಣೆ ಹೊತ್ತಿಕೊಂಡಿಲ್ಲ. ಅಫ್ಘಾನಿಸ್ತಾನದ ಭಯೋತ್ಪಾದನೆಯ ಸಮಸ್ಯೆಯನ್ನು ನಿಭಾಯಿಸಲು ಪಾಕಿಸ್ತಾನ ಮತ್ತು ಅಫ್ಘಾನ್ ತಾಲಿಬಾನ್ ನಡುವಿನ ಮೂರನೇ ಸುತ್ತಿನ ಮಾತುಕತೆಗಳು ಯಾವುದೇ ಒಪ್ಪಂದಕ್ಕೆ ಬರಲು ವಿಫಲವಾದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ.
ಇದನ್ನೂ ಓದಿ : 10.ಮೀ ಏರ್ ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಆದ ಸಾಮ್ರಾಟ್ ರಾಣಾ!



















