ನವದೆಹಲಿ: ದಿಲ್ಲಿಯ ಕೆಂಪುಕೋಟೆ ಬಳಿ ನಿನ್ನೆ ಸಂಜೆ ಕಾರು ಬಾಂಬ್ ಸ್ಫೋಟ ನಡೆಸಿದ ಶಂಕಿತ ವೈದ್ಯ ಉಮರ್ ಮೊಹಮ್ಮದ್‌ನ ಮೊದಲ ಫೋಟೋ ಬಹಿರಂಗಗೊಂಡಿದೆ. ಸ್ಫೋಟಕ್ಕೂ ಮುನ್ನ ಈ ಕಾರು ಕೆಂಪುಕೋಟೆಯ ಬಳಿ ಮೂರು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎಂಬ ಆಘಾತಕಾರಿ ಅಂಶವೂ ಬಯಲಾಗಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಇದು ದೃಢಪಟ್ಟಿದೆ.

ಡಾ.ಉಮರ್ ಮೊಹಮ್ಮದ್ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 1989ರ ಫೆಬ್ರವರಿ 24ರಂದು ಜನಿಸಿದವನು. ಆತ ಫರೀದಾಬಾದ್‌ನ ಅಲ್-ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಈತ ಇತ್ತೀಚೆಗೆ ಬಂಧಿತರಾದ ವೈದ್ಯ ಅದೀಲ್ ಅಹಮದ್ ರಾಥರ್ ಮತ್ತು ಮುಜಮ್ಮಿಲ್ ಶಕೀಲ್‌ರ ಆಪ್ತ ಸಹಚರನಾಗಿದ್ದು, ಈ ಮೂವರೂ ಜಮ್ಮು ಕಾಶ್ಮೀರ, ಹರ್ಯಾಣ ಪೊಲೀಸರು ಪತ್ತೆಹಚ್ಚಿದ ‘ವೈಟ್ ಕಾಲರ್ ಟೆರರ್ ಮಾಡ್ಯೂಲ್’ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಸಿಸಿಟಿವಿ ದೃಶ್ಯಗಳ ಪ್ರಕಾರ, ಸ್ಫೋಟಕ್ಕೂ ಮುನ್ನ ಬಿಳಿ ಹುಂಡೈ ಐ20 ಕಾರು ಕೆಂಪುಕೋಟೆ ಬಳಿಯ ಪಾರ್ಕಿಂಗ್‌ನಲ್ಲಿ 3:19ರಿಂದಲೇ ನಿಂತಿತ್ತು. ಕಾರಿನ ಚಾಲಕ ಉಮರ್ ಮೂರು ಗಂಟೆಗಳ ಕಾಲ ಕಾರಿನೊಳಗೆಯೇ ಇದ್ದು, ಒಮ್ಮೆಯೂ ಹೊರಗೆ ಬಂದಿಲ್ಲ. ಸುಮಾರು 6:30ಕ್ಕೆ ಕಾರು ಚಲಿಸಲು ಆರಂಭಿಸಿದ್ದು, ಸ್ವಲ್ಪ ಹೊತ್ತಲ್ಲೇ ಮೆಟ್ರೋ ಸ್ಟೇಷನ್ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ಫೋಟಗೊಂಡಿದೆ.

ತನಿಖೆಯ ಪ್ರಕಾರ, ಹಲವು ಬಾರಿ ಈ ಕಾರಿನ ಮಾಲಿಕತ್ವ ಬದಲಾಗಿದೆ. ಗುರುಗ್ರಾಮದ ಸಲ್ಮಾನ್ ಎಂಬಾತ ಮಾರಾಟ ಮಾಡಿದ ಕಾರು ಒಖ್ಲಾದ ದೇವೇಂದರ್‌ಗೆ ಹೋಗಿ, ನಂತರ ಅಂಬಾಲಾದ ವ್ಯಕ್ತಿಗೆ ಮಾರಲಾಗಿತ್ತು. ಅಂಬಾಲಾದಿಂದ ಪುಲ್ವಾಮಾಕ್ಕೆ ಬಂದು, ಅಮೀರ್, ತಾರಿಕ್ ಮತ್ತು ಉಮರ್ ರಶೀದ್‌ರ ನಡುವೆ ಸಂಪರ್ಕ ಬೆಳೆದಿದೆ. ಅಮೀರ್ ಕಾರನ್ನು ಉಮರ್ ಮೊಹಮ್ಮದ್‌ಗೆ ನೀಡಿದ್ದಾನೆ. ಅಮೀರ್ ಮತ್ತು ತಾರಿಕ್ ಅವರನ್ನು ದಿಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಉಮರ್ ಮೊಹಮ್ಮದ್ ತನ್ನ ಸಹಚರರು ಬಂಧನಕ್ಕೊಳಗಾಗಿ, 2,900 ಕಿಲೋ ಸ್ಫೋಟಕ ವಸ್ತುಗಳು ವಶಪಡಿಸಿಕೊಂಡ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಆತಂಕಗೊಂಡು, ಕೆಂಪುಕೋಟೆ ಬಳಿ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ. ಅಮೋನಿಯಂ ನೈಟ್ರೇಟ್ ಫ್ಯೂಯೆಲ್ ಆಯಿಲ್ (ANFO) ಬಳಸಿ ಸ್ಫೋಟ ನಡೆಸಿರಬಹುದು ಎಂದು ಹೇಳಲಾಗಿದೆ.
ಉಮರ್ ಮೊಹಮ್ಮದ್‌ನ ತಾಯಿ ಮತ್ತು ಸಹೋದರರನ್ನು ಜಮ್ಮು ಕಾಶ್ಮೀರದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಅದೀಲ್ ಅಹಮದ್ ರಾಥರ್‌ನ ಲಾಕರ್‌ನಿಂದ AK-47 ರೈಫಲ್ ಮತ್ತು ಗುಂಡುಗಳು ಪತ್ತೆಯಾಗಿದ್ದು, ಶಸ್ತ್ರಾಸ್ತ್ರ ಕಾಯಿದೆ ಮತ್ತು ಅನಧಿಕೃತ ಚಟುವಟಿಕೆಗಳ (ತಡೆ) ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಫರೀದಾಬಾದ್‌ನಲ್ಲಿ ಅದೀಲ್ ಮತ್ತು ಮುಜಮ್ಮಿಲ್ ಶಕೀಲ್ ಬಳಿಯಿದ್ದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಮತ್ತೊಬ್ಬ ವೈದ್ಯೆ ಶಹೀನ್ ಶಾಹಿದ್ ಅವರ ಕಾರಿನಿಂದ ರೈಫಲ್ ಮತ್ತು ಜೀವಂತ ಗುಂಡುಗಳು ಪತ್ತೆಯಾಗಿದ್ದು, ಅವರನ್ನೂ ಸೋಮವಾರ ಬಂಧಿಸಲಾಗಿದೆ.
ಇದನ್ನೂ ಓದಿ: ಸಂಗಾತಿಗಳ ಬಂಧನದಿಂದ ಆತಂಕಗೊಂಡು ವೈದ್ಯನಿಂದಲೇ ದಿಲ್ಲಿ ಬಾಂಬ್ ಸ್ಫೋಟ?



















