ನವದೆಹಲಿ : ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಫೋಟದ ತೀವ್ರತೆಗೆ ದೇಹಗಳು ಛಿದ್ರಛಿದ್ರವಾಗಿದ್ದು, ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ-1ರ ಬಳಿ ಸ್ಫೋಟ ಸಂಭವಿಸಿದ್ದು, 8 ಕಾರುಗಳು ಹಾಗೂ 5ಕ್ಕೂ ಹೆಚ್ಚು ಆಟೋಗಳೂ ಅಗ್ನಿ ಜ್ವಾಲೆಯಲ್ಲಿ ಧಗಧಗಿಸಿವೆ. ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲೂ ಭಾರೀ ವೈರಲ್ ಆಗುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ದೆಹಲಿ ಸಮೀಪ ವಿವಿಧೆಡೆ 2,900 ಕೆಜಿ ಸ್ಫೋಟಕ ವಸ್ತುಗಳನ್ನ ಪತ್ತೆಹಚ್ಚಿ ಜಪ್ತಿ ಮಾಡಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಗಂಟೆಗಳಲ್ಲಿ ಭೀಕರ ಸ್ಫೋಟ ಸಂಭವಿಸಿರುವುದು ಜನರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ದೆಹಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನೂ ನಿಯಂತ್ರಣಕ್ಕೆ ತಂದಿದ್ದಾರೆ. ಈ ಬೆನ್ನಲ್ಲೇ ವಿಧಿವಿಜ್ಞಾನ ಪ್ರಯೋಗಾಲಯ ತಂಡ, ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಧಾವಿಸಿದ್ದು, ಕಾರು ಸ್ಫೋಟಕ್ಕೆ ಕಾರಣ ಪತ್ತೆಹಚ್ಚುವ ಕೆಲಸದಲ್ಲಿ ತೊಡಗಿವೆ. ಕಾರು ಸ್ಫೋಟಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಇದನ್ನೂ ಓದಿ : ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್‌ಗೆ ಮತ್ತೆ ಜೀವ ಬೆದರಿಕೆ


















