ಉಡುಪಿ : ಗ್ರಾಮೀಣ ನಿವಾಸಿಗಳನ್ನು ಗುರಿಯಾಗಿಸಿಕೊಂಡು ಮತ್ತೊಂದು ಸೈಬರ್ ವಂಚನೆ ನೆಡೆದಿದ್ದು, ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಯರ್ಲಪಾಡಿ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
49 ವರ್ಷದ ರೈತನೊಬ್ಬ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಎಂಬ ಹೆಸರಿನ ನಕಲಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ಪರಿಣಾಮ, ಬರೋಬ್ಬರಿ ₹1.74 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ವಂಚನೆಗೆ ಒಳಗಾದ ವ್ಯಕ್ತಿ ರಾಜೇಶ್ ಆಚಾರ್ಯ ಎಂದು ತಿಳಿದುಬಂದಿದೆ. ಇವರು ಮೆಸೇಜ್ ರೂಪದಲ್ಲಿ ಬಂದ ಪಿಎಂ ಕಿಸಾನ್ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ್ದಾರೆ. ಪರಿಣಾಮ ಹಂತ ಹಂತವಾಗಿ ಇವರ ಖಾತೆಯಿಂದ ಬೇರೆ ಖಾತೆಗೆ ಹಣ ವರ್ಗಾವಣೆಯಾಗಿದ್ದು, ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ದಿನದ ಹಿಂದೆ ಹಾವೇರಿಯಲ್ಲಿ, ತಿಂಗಳ ಹಿಂದೆ ಬೀದರ್‌ನಲ್ಲಿ
3 ದಿನದ ಹಿಂದೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ರೈತ ಬಸವರಾಜಪ್ಪ ಜಾದವ್(32) ಕೂಡ ಅಪರಿಚಿತ ವ್ಯಕ್ತಿಯಿಂದ ಬಂದ ಪಿಎಂ ಕಿಸಾನ್ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ್ದರು. ಪರಿಣಾಮ 72,000 ರೂಪಾಯಿ ಹಣವನ್ನು ಕಳೆದುಕೊಂಡಿದ್ದರು.
ಇನ್ನು ಬೀದರ್‌ನ ವಿದ್ಯಾನಗರದ ನಿವಾಸಿಯಾದ ನಿವೃತ್ತ ಸರ್ಕಾರಿ ನೌಕರ ಶಶಿಕಾಂತ್ ಇದೇ ಪಿಎಂ ಕಿಸಾನ್ ಎಪಿಕೆ ಡೌನ್ಲೋಡ್ ಮಾಡಿ ವಂಚಕರ ಬಲೆಗೆ ಬಿದ್ದಿದ್ದರು. ಅವರ ಖಾತೆಯಿಂದ ಸುಮಾರು 4 ಲಕ್ಷದ 29 ಸಾವಿರ ರೂಪಾಯಿ ಬೇರೆ ಖಾತೆಗೆ ವರ್ಗಾವಣೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅಪರಿಚಿತ ವ್ಯಕ್ತಿಗಳಿಂದ ಬಂದ ಸಂದೇಶ, ಕರೆಗಳನ್ನು ನಿರಾಕರಿಸಿ ಜಾಗರೂಕತೆಯಲ್ಲಿರಬೇಕಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಫ್ಲೈಓವರ್ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ!



















