ಹಾವೇರಿ: ಪ್ರೀತಿಸಿ ಮದುವೆಯಾದ ಪತ್ನಿಯ ಮೇಲೆ ಪತಿರಾಯ ಮನಸೋ ಇಚ್ಚೇ ಹಲ್ಲೆ ನಡೆಸಿದ ಪರಿಣಾಮ 6 ತಿಂಗಳ ಭ್ರೂಣ ಹೊಟ್ಟೆಯಲ್ಲೇ ಅಸುನೀಗಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ.
ಪತ್ನಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಪತಿ ಅಟ್ಟಹಾಸ ಮೆರೆದಿದ್ದು, ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುವನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓಣಿಕೇರಿಯ ಅಮೀರಬಿ ಮನಿಯಾರ್, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದ ಯುವಕ ಅಹ್ಮದರಾಜ್ನನ್ನು ಪ್ರೀತಿಸಿದ್ದಳು. ಈ ಪ್ರೀತಿ ದೈಹಿಕ ಸಂಪರ್ಕದವರೆಗೂ ಹೋದ ಕಾರಣ ಅಮೀರಬಿ ಗರ್ಭಿಣಿಯಾಗಿದ್ದರು. ಬಳಿಕ ಈ ವಿಷಯ ಮನೆವರಿಗೆ ತಿಳಿದಿದ್ದು, ಎರಡು ಕಡೆಯ ಊರಿನ ಜನರು ಸೇರಿ ಅದ್ದೂರಿಯಾಗಿ ಇವರ ಮದುವೆ ಮಾಡಿಸಿದ್ದರು. ಆದರೆ, ಮದುವೆ ಮಾಡಿಕೊಂಡ ಅಹ್ಮದರಾಜ್ ಪತ್ನಿ ಗರ್ಭಿಣಿ ಎಂಬುದನ್ನೂ ನೋಡದೆ ಹಿಂಸೆ ನೀಡಿದ್ದಾನೆ. ಲಾಠಿ ಮತ್ತು ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ತನ್ನ ಹೊಟ್ಟೆಯಲ್ಲಿದ್ದ ಭ್ರೂಣದ ಸಾವಿಗೆ ತನ್ನ ಗಂಡ ಮತ್ತು ಆತನ ಕುಟುಂಬದವರೆ ಕಾರಣ ಎಂದು ಸಂತ್ರಸ್ತೆ ಅಮೀರಬಿ ಮನಿಯಾರ್ ಹೇಳಿದ್ದಾರೆ. ಪ್ರತಿನಿತ್ಯ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗುತ್ತಿತ್ತು. ವಿಷಯವನ್ನು ಯಾರಿಗೂ ಹೇಳದಂತೆ ನನಗೆ ಬೆದರಿಕೆಯನ್ನೂ ಹಾಕಿದ್ದರು. ಈ ಭಯದಿಂದಲೇ ಇಂದು ನಾನು ಈ ಸ್ಥಿತಿಗೆ ಬರಬೇಕಾಯಿತು. ನಾನು ಆರು ತಿಂಗಳ ಗರ್ಭಿಣಿ ಅಂತಲೂ ನೋಡದೆ ಹಲ್ಲೆ ಮಾಡಿದ್ದಾರೆ ಎಂದು ಗಂಡನ ಮನೆಯವರ ವಿರುದ್ಧ ಅಮೀರಬಿ ಆರೋಪ ಮಾಡಿದ್ದಾರೆ. ಮಗಳ ಮೆಲೆ ಹಲ್ಲೆ ನಡೆಸಿದ್ದಲ್ಲದೆ ಭ್ರೂಣವನ್ನೇ ಕೊಂದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಅಮಿರಬಿ ಪೋಷಕರು ಒತ್ತಾಯಿಸಿದ್ದು, ಈ ಸಂನಂಧ ಹಾನಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಉಡುಪಿ | ಊಟ ಮಾಡುವಾಗ ಕೈ ತಾಕಿದ್ದಕ್ಕೆ, ಪಬ್ ಮುಂದೆ ಕೈ-ಕೈ ಮಿಲಾಯಿಸಿಕೊಂಡ ಯುವಕರು ; ನಾಲ್ವರ ಬಂಧನ



















